ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ನಡೆಯಲಿದೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಯುವಕರಿದ್ದು, ಅವರೆಲ್ಲರಿಗೂ ಸಚಿವರಾಗುವ ಅರ್ಹತೆ ಇದೆ. ಅದೇ ರೀತಿ ನನಗೂ ಕೂಡ ಸಚಿವನಾಗಬೇಕು ಎನ್ನುವ ಬಯಕೆ ಮತ್ತು ಆಸೆ ಎರಡೂ ಇದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆಯದ್ದೇ ಸದ್ದು. ಈ ನಡುವೆ ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳ ಮೂಲಕ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಇದೀಗ ಮೊದಲ ಬಾರಿಗೆ ಸಚಿವನಾಗುವ ತಮ್ಮ ಆಸೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಸಚಿವನಾಗೋ ಬಯಕೆ ನನಗೂ ಇದೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ನಡೆಯಲಿದೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಯುವಕರಿದ್ದು, ಅವರೆಲ್ಲರಿಗೂ ಸಚಿವರಾಗುವ ಅರ್ಹತೆ ಇದೆ. ಅದೇ ರೀತಿ ನನಗೂ ಕೂಡ ಸಚಿವನಾಗಬೇಕು ಎನ್ನುವ ಬಯಕೆ ಮತ್ತು ಆಸೆ ಎರಡೂ ಇದೆ ಎಂದು ನೇರವಾಗಿಯೇ ಹೇಳಿದರು.
ಜವಾಬ್ದಾರಿ ಕೊಟ್ಟರೆ ಕೆಲಸ ಮಾಡುವೆ
ಒಂದು ವೇಳೆ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ಆ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ ಪ್ರದೀಪ್ ಈಶ್ವರ್, ನನಗೆ ಸಚಿವ ಸ್ಥಾನ ನೀಡಿದರೆ ಖಂಡಿತಾ ಖುಷಿಯಾಗುತ್ತದೆ. ಮಂತ್ರಿ ಪದವಿ ಸಿಕ್ಕರೆ ಅದನ್ನು ಒಂದು ದೊಡ್ಡ ಜವಾಬ್ದಾರಿ ಎಂದು ಭಾವಿಸಿ ರಾಜ್ಯದ ಕೆಲಸ ಮಾಡುವೆ. ಯುವಕರಿಗೂ ಅವಕಾಶ ಸಿಗಬೇಕು ಎನ್ನುವುದು ನನ್ನ ದೊಡ್ಡ ಆಸೆ ಎಂದರು.
ಮಂತ್ರಿ ಸ್ಥಾನ ಸಿಗದಿದ್ದರೆ ಅಸಮಾಧಾನಗೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ನಿಷ್ಠೆಯನ್ನು ಈ ರೀತಿ ವ್ಯಕ್ತಪಡಿಸಿದರು; ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ನಾನು ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧನಾಗಿ ಕೆಲಸ ಮಾಡುವೆ. ಸ್ಥಾನ ಸಿಗದಿದ್ದರೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಪಕ್ಷಕ್ಕಾಗಿ ನಾನು ಆಫೀಸ್‌ನ ಕಸಗೂಡಿಸಲು ಸಹ ಸಿದ್ಧನಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು. ಅಂತಿಮವಾಗಿ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.


