Chikkaballapur: ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಸ್ವಚ್ಛತಾ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಫುರ (ಸೆ.24): ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಿರ್ಮಾಣವಾಗಿರುವ ಪೌರಕಾರ್ಮಿಕರ ನೂತನ ವಿಶ್ರಾಂತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಪೌರ ಕಾರ್ಮಿಕರ ಪಾದ ತೊಳೆದು, ನಮಸ್ಕಾರ ಮಾಡಿ ಗೌರವ ಸಮರ್ಪಿಸಿ ಮಾತನಾಡಿದರು. ಪೌರ ಕಾರ್ಮಿಕರ ಶ್ರೋಯೋಭಿವೃದ್ಧಿಗೆ ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದರು.
ಕಾರ್ಮಿಕರನ್ನು ಕೀಳಾಗಿ ಕಾಣಬೇಡಿ: ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.
ಹೊರ ಗುತ್ತಿಗೆ ಕಾರ್ಮಿಕರ ಕಾಯಂ: ಅಲ್ಲದೆ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಈ ಬಾರಿಯೂ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದರಂತೆ ನಡೆಯಲಿದ್ದಾರೆ ಎಂದರು. ಪೌರಕಾರ್ಮಿಕರ ಕುಟುಂಬಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿದ್ದಾರೆ. ಜತೆಗೆ ಸರ್ಕಾರ ಉಚಿತವಾಗಿ ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಕಾವೇರಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು: ಎಚ್.ಡಿ.ಕುಮಾರಸ್ವಾಮಿ
ಸವಲತ್ತು ಪಡೆಯಲು ಹೋರಾಡಿ: ಪೌರ ಕಾರ್ಮಿಕರ ಕೆಲಸ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ ಪೌರಕಾರ್ಮಿಕರು ಸವಲತ್ತು ಪಡೆಯುವಲ್ಲಿ ಹಿಂದುಳಿದಿದ್ದಾರೆ. ನೀವು ಹೋರಾಟ ಮಾಡಿದರೆ ಸಿಗಬೇಕಾದ ಸವಲತ್ತು ಸಿಗುತ್ತದೆ. ನಿಮ್ಮ ಮಕ್ಕಳನ್ನು ಇದೇ ವೃತ್ತಿಗೆ ತಾರದೆ ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಅವರನ್ನು ವಿದ್ಯಾವಂತರನ್ನಾಗಿ ಉನ್ನತ ಹುದ್ದೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು ಎಂದರು.