ರಾಜ್ಯದಲ್ಲಿನ ಅಧಿಕಾರ ಹಂಚಿಕೆಯ ಊಹಾಪೋಹಗಳಿಗೆ ಸದ್ಯದಲ್ಲೇ ತೆರೆಬೀಳಲಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಹೈಕಮಾಂಡ್‌ನ ಕೈ-ಕಾಲಿಗೂ ಬಿದ್ದು ಸಾಕಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗ (ನ.29): ಊಹಾಪೋಹಗಳಿಗೆ ಸದ್ಯದಲ್ಲೇ ತೆರೆಬೀಳಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ಅವರು ಪ್ರಸ್ತುತ ರಾಜ್ಯ ರಾಜಕಾರಣದ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿ, ಗೊಂದಲವೇನೇ ಇರಲಿ, ಸಂಪುಟ, ವಿಸ್ತರಣೆ ಮತ್ತು ಬದಲಾವಣೆಯಾಗಲೇಬೇಕು ಎಂಬುದು ನನ್ನ ಒತ್ತಾಯ. ಈಗಾಗಲೇ ಹೈಕಮಾಂಡ್ ಸೇರಿದಂತೆ ಎಲ್ಲರ ಮನೆ ಬಾಗಿಲಿಗೂ ಹೋಗಿ ಕಾಲಿಗೆ ಬಿದ್ದಿದ್ದೇನೆ.
ಹೈಕಮಾಂಡಿನ ಕೈ-ಕಾಲಿಗೂ ಬಿದ್ದು ಸಾಕಾಗಿದೆ. ಎಲ್ಲರೂ ಪ್ರೀತಿಯಿಂದ ಮಾತನಾಡಿಸಿ ಭರವಸೆ ನೀಡಿದ್ದಾರೆ. ಗೊಂದಲ ಆದಷ್ಟು ನಿವಾರಣೆಯಾಗಲೇಬೇಕು. ತಡವಾದಷ್ಟು ಪಕ್ಷಕ್ಕೆ ಹೆಚ್ಚಿನ ಹಾನಿಯಾಗಲಿದೆ ಎಂದರು. ಶೀಘ್ರದಲ್ಲೇ ಹೈಕಮಾಂಡ್ ಗೊಂದಲಕ್ಕೆ ಇತಿಶ್ರೀ ಹಾಡಲೇಬೇಕು. ಸಚಿವ ಮಧುಬಂಗಾರಪ್ಪನವರು ಕೂಡ ನಾನು ಸಚಿವ ಆಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದಲ್ಲಿ ಹೆಚ್ಚಿನ ಹಣ ನೀಡುತ್ತಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದ ರಸ್ತೆ ಕಾಮಗಾರಿ ಹಾಗೂ ವೀರಾಪುರ ಗ್ರಾಮದ 10 ಲಕ್ಷ ರು. ವೆಚ್ಚದ ರೆಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಳೆದ ವರ್ಷ ಮುಂಚಿತವಾಗಿ ಮುಂಗಾರು ಪ್ರಾರಂಭವಾಗಿದ್ದು, ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿತ್ತು. ಈ ವರ್ಷ ಹಳೆಯ ಕಾಮಗಾರಿಯೊಂದಿಗೆ ಹೊಸ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ. ಇನ್ನೂ ಹಲವಾರು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದ್ದು, ಹಂತ ಹಂತವಾಗಿ ಪೂರ್ಣಗೊಳಿಸುವುದಾಗಿ ಹೇಳಿದರು.
ಹುತ್ತಾದಿಂಬಾ ಗ್ರಾಮದ ಬನಶಂಕರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಲಕ್ಷ ರು. ಬಿಡುಗಡೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಕೇಳುತ್ತಿದ್ದೀರಿ. ತಾಲೂಕಿನ ಹಲವು ಗ್ರಾಮಗಳಲ್ಲಿ ಸಮುದಾಯ ಭವನ, ದೇವಸ್ಥಾನ ಜೀರ್ಣೋದ್ಧಾರಗಳಿಗೆ ಹಣ ನೀಡಬೇಕಾಗಿದ್ದು, ಈಗಾಗಲೇ 147 ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಮಾರಿಜಾತ್ರೆ, ಊರಿನ ಹಬ್ಬಗಳ ಸಂದರ್ಭದಲ್ಲಿ ಜನರಿಗೆ ಸಹಕಾರಿಯಾಗಲು ಆ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮೂರಿನ ದೇವಸ್ಥಾನಕ್ಕೆ ಇನ್ನೂ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.


