Asianet Suvarna News Asianet Suvarna News

ಹೆದರಿಕೊಂಡು, ಹೆದರಿಸಿ ರಾಜಕೀಯ ಮಾಡೋದಿಲ್ಲ: ಶಾಸಕ ಬೇಳೂರು ಗುಡುಗು

ಕಳೆದ ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ತಮಗೆ ಟಿಕೆಟ್ ಘೋಷಣೆಯಾದ ಬಳಿಕ ಕಾಂಗ್ರೆಸ್ಸಿಂದ ಕಾಲ್ಕಿತ್ತ ನಾಯಿ-ನರಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೊತೆಯಲ್ಲಿ ರಾಜಕೀಯವಾಗಿ ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. 

Mla Belur Gopalakrishna Slams On Minister Madhu Bangarappa At Shivamogga gvd
Author
First Published Nov 24, 2023, 11:59 PM IST

ಸಾಗರ (ನ.24): ಕಳೆದ ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ತಮಗೆ ಟಿಕೆಟ್ ಘೋಷಣೆಯಾದ ಬಳಿಕ ಕಾಂಗ್ರೆಸ್ಸಿಂದ ಕಾಲ್ಕಿತ್ತ ನಾಯಿ-ನರಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೊತೆಯಲ್ಲಿ ರಾಜಕೀಯವಾಗಿ ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಇನ್ನೊಬ್ಬರನ್ನು ಹೆದರಿಸಿ, ಬೇರೆಯವರಿಗೆ ಹೆದರಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗುಡುಗಿದ್ದಾರೆ. ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟವರನ್ನು ಮರುಸೇರ್ಪಡೆ ಪ್ರಶ್ನೆಯೇ ಇಲ್ಲ. ಅಂಥ ದುಷ್ಟಕೂಟವನ್ನು ಸೇರಿಸಿಕೊಳ್ಳಲು ನಾನು ಬಿಡುವುದಿಲ್ಲ. ಅವರನ್ನು ಹತ್ತಿರವೂ ಸೇರಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಬೇಳೂರು ವೇಗಕ್ಕೆ ತಡೆಯೊಡ್ಡುವ ಶಕ್ತಿ ಯಾರಿಗೂ ಇಲ್ಲ. ನನ್ನ ಪತ್ರಗಳಿಗೆ ತಡೆಯೊಡ್ಡುವವರು ಯಾರೂ ಇಲ್ಲ. ಸಿಎಂ, ಡಿಸಿಎಂಗಳು ನನಗೆ ಗೌರವ ಕೊಡುತ್ತಿದ್ದಾರೆ. ಅಷ್ಟು ಸಾಕು. ಪಕ್ಷದ ಆಂತರಿಕ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದ್ದು, ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಯಾವುದೇ ಮುಸುಕಿನ ಗುದ್ದಾಟ, ಭಿನ್ನಾಭಿಪ್ರಾಯವಿಲ್ಲ. ವೈಯಕ್ತಿಕವಾಗಿ ಯಾವುದೇ ವೈಷಮ್ಯವಿಲ್ಲ. ಹಿರಿಯ ಶಾಸಕನಾಗಿರುವ ನನ್ನ ಗಮನಕ್ಕೂ ಬಾರದೇ ಕೆಲಸ ಆಗುತ್ತಿರುವುದನ್ನು ಕೇಳುವುದು ನಮ್ಮ ಹಕ್ಕು. ಅದರಲ್ಲಿ ಯಾವುದೇ ರಾಜಿ ಇಲ್ಲ ಎನ್ನುವ ಮೂಲಕ ಮಧು ಬಂಗಾರಪ್ಪ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ರಾಜ್ಯದ ಜನತೆ ಮುಂದೆ ಸಿದ್ದರಾಮಯ್ಯ ಸರ್ಕಾರ ಬೆತ್ತಲಾಗಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ ಯಾವುದೇ ಕೊರತೆ ಆಗದಂತೆ ಕೆಲಸ ಮಾಡಿಸುವ ಗುರಿ ಹೊಂದಿದ್ದು, ಎಲ್ಲರ ಸಹಕಾರದಿಂದ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಗಣಪತಿಕೆರೆ ಮೇಲ್ದಂಡೆಯ ರಸ್ತೆ ಕಾಮಗಾರಿ, ಜೋಗ ರಸ್ತೆಯ ಸಣ್ಣಮನೆ ಸೇತುವೆ ಕಾಮಗಾರಿ, ಚೆನ್ನಮ್ಮ ವೃತ್ತ, ಮೊದಲಾದ ಕಾಮಗಾರಿಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪಟ್ಟಣದ ತ್ಯಾಗರ್ತಿ ಕ್ರಾಸ್‌ನಿಂದ ಎಲ್.ಬಿ. ಕಾಲೇಜುವರೆಗಿನ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾರ್ಯವನ್ನು ಶೀಘ್ರವಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಮಳಿಗೆಯವರೊಂದಿಗೆ ಚರ್ಚಿಸಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಕೆಲಸ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಟ್ಟಣದಲ್ಲಿ ಅಗ್ರಹಾರ ವೃತ್ತದಿಂದ ಹೆಗಡೆ ಫಾರಂವರೆಗಿನ ಹೊಸನಗರ ರಸ್ತೆ, ಚೆನ್ನಮ್ಮ ವೃತ್ತದಿಂದ ಗಂಧದ ಕಾಂಪ್ಲೆಕ್ಸ್‌ವರೆಗೆ ಕೆಳದಿ ರಸ್ತೆ ಅಗಲೀಕರಣವಾಗಲಿದೆ. ವಿವಿಧ ಇಲಾಖೆಗಳ ಅನುಮತಿ ಪಡೆದು ಕೆಲಸ ಪ್ರಾರಂಭಿಸಲಾಗುವುದು. ಕೆಳದಿ ರಸ್ತೆಯ ಚೆನ್ನಮ್ಮ ವೃತ್ತದಲ್ಲಿ ನೂತನವಾಗಿ ರಾಣಿ ಚೆನ್ನಮ್ಮ ಪ್ರತಿಮೆ ನಿರ್ಮಿಸುವ ಕುರಿತು ಪ್ರಸ್ತಾಪವಿದ್ದು, ಸ್ಥಳೀಯರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಸಹಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಎಚ್ಚರಿಕೆ

ಸೊರಬ ಬೈಪಾಸ್‌ ರಸ್ತೆ ಅಗಲೀಕರಣವು ₹3 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು. ಎಪಿಎಂಸಿಗೆ ₹3 ಕೋಟಿ, ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣ ಖರೀದಿಗೆ ₹1.99 ಕೋಟಿ ಅನುದಾನ ಬಂದಿದೆ. ಇದರ ಸಮರ್ಪಕ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸುರೇಶ್ ಬಾಬು, ಮಂಜು ಬೆಳಲಮಕ್ಕಿ, ನಾರಾಯಣಪ್ಪ, ಶ್ರೀದರ್ ಪಟೇಲ್, ಚಂದ್ರಶೇಖರ್ ಕಂಬಳಿಕೊಪ್ಪ, ಬಸವರಾಜ ಕುಗ್ವೆ, ಯಶವಂತ ಫಣಿ, ಟಿ.ಪಿ.ರಮೇಶ್, ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios