ಹಾವೇರಿ, (ಜ.18): ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಬರಲು ಕಾರಣದ 17 ಶಾಸಕರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಹಾವೇರಿಯಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023 ನಂತರ ಆ 17 ಶಾಸಕರು ಬಿಜೆಪಿಯಲ್ಲೇ ಇರ್ತಾರೋ ಇಲ್ಲಾ ಕಾಂಗ್ರೆಸ್ ಹೋಗ್ತಾರೋ. ಇಲ್ಲಾ ಅವರೇ ನಿಷ್ಠಾವಂತ ಬಿಜೆಪಿ ಶಾಸಕರಾಗ್ತಾರೋ ಯಾರಿಗೆ ಗೊತ್ತು..? ಈಗ ಭಾರತ ಮಾತಾಕಿ ಜೈ ಅಂತಿದಾರೆ. ಮೋದಿ ಗಾಳಿ ಕಡಿಮೆ ಆಯಿತು ಅಂದ್ರೆ ಸೋನಿಯಾ ಮಾತಾಕಿ ಜೈ ಅಂತಾರ. ಇಲ್ಲಾಂದ್ರ ಅಪ್ಪಾಜಿ ದೇವೇಗೌಡರಿಗೆ ಜೈ ಅಂತಾರ ಎಂದು ಲೇವಡಿ ಮಾಡಿದರು.

'ಶಾ ಬಿಜೆಪಿ ಸರ್ಕಾರ ಇರುತ್ತೆ ಅಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಅಂದಿಲ್ಲ' 

ಬಿ.ಎಸ್.​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವವರೆಗೂ ನಾನು ಸಚಿವನಾಗುವುದಿಲ್ಲ. ಅವರ ನಾಯಕತ್ವದಲ್ಲಿ ನಾನು ಮಂತ್ರಿ ಆಗುವುದಿಲ್ಲ. ನಮ್ಮದೇ ನೀತಿ-ತತ್ವಗಳು ಇದಾವೆ. ಅದನ್ನು ಮುಂದೆ ನಾನು ಮಂತ್ರಿ ಆದಾಗ ಹೇಳುತ್ತೇನೆ ಎಂದರು.

ಪಕ್ಷದ ಬಗ್ಗೆ ಯಾರು..? ಯಾಕೆ..? ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ಸಿ.ಪಿ ಯೋಗೇಶ್ವರ್​​ ಹೇಳೋ ಅವಶ್ಯಕತೆ ಇಲ್ಲ. ಮೂಲ ಬಿಜೆಪಿಗರು ಇದ್ದಾರೆ, ಜಿಲ್ಲಾವಾರು ಪ್ರಾತಿನಿಧ್ಯ ಸಿಕ್ಕಲ್ಲ, ಹೀಗಾಗಿ ಅಸಮಾಧಾನ ಇದೆ. ಅದನ್ನು ಬಗೆಹರಿಸುವುದು ಸಿಎಂ ಕೆಲಸ, ಅದು ಬಿಟ್ಟು ದಿಲ್ಲಿಯವರ ಕಡೆ ಕೈ ಮಾಡಿ ತೋರಿಸುವುದಲ್ಲ. ಅದು ದಿಲ್ಲಿಯವರ ಕೆಲಸವಲ್ಲ ಎಂದು ಸಿಎಂ ಬಿಎಸ್‌ವೈ ವಿರುದ್ಧ ಕಿಡಿಕಾರಿದರು.

ಯೋಗೇಶ್ವರ್​​ ಏನೋ ಚಾನ್ಸ್ ಹೊಡೆದಿದ್ದಾರೆ ಹೊಡೀಲಿ, ಅವರಿಗೆ ಸಚಿವ ಸ್ಥಾನ ಹೇಗೆ ಆಯಿತು ಅಂತಾ ಎಲ್ಲರಿಗೂ ಗೊತ್ತಿದೆ. ಈ ಸಲ ಹೆಂಗ್ ಬಿಜೆಪಿ ಸರ್ಕಾರ ಬಂತು ನಮಗೆ ಗೊತ್ತಿದೆ. ನಮ್ಮ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತಾಡುವ ಅವಶ್ಯಕತೆ ಯೋಗೇಶ್ವರ್​ಗಿಲ್ಲ ಖಡಕ್ ಆಗಿ ಹೇಳಿದರು.