ಹಾವೇರಿ, (ಜ.18): ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಿಎಂ ವಿರುದ್ಧ ಸಿಡಿ ಬಾಂಬ್​ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಜ.16, 17 ಕರ್ನಾಟಕ ಪ್ರವಾಸದ ವೇಳೆ ಇನ್ನೂ ಮುಂದಿನ ಎರಡೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು (ಸೋಮವಾರ) ಹಾವೇರಿಯಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್​, ಅಮಿತ್ ಶಾ 2.5 ವರ್ಷ ಬಿಜೆಪಿ ಸರ್ಕಾರವಿರುತ್ತದೆ ಅಂದಿದ್ದಾರೆ. ಆದರೆ, ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಅಂತ ಹೇಳಿಲ್ಲ ಎಂದರು.

ಅಸಮಾಧಾನಿತರಿಗೆ ಚಳಿ ಬಿಡಿಸಿದ ಚಾಣಕ್ಯ, ಬಂಡಾಯ ಥಂಡಾ ಥಂಡಾ, ಖೇಲ್ ಖತಂ, ನಾಟಕ್ ಬಂದ್!

ಯಡಿಯೂರಪ್ಪ ಸಿಎಂ ಆಗಿರುವವರೆಗೂ ನಾನು ಮಂತ್ರಿ ಆಗುವುದಿಲ್ಲ. ನಾನು ಸಚಿವ ಸ್ಥಾನ ಕೇಳಿದವನಲ್ಲ. ಯಾವ್ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲವೋ, ಅಂತಹ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡುವಂತೆ ಹೇಳಿದ್ದೆ ಅಷ್ಟೇ. ಇನ್ನು ನನಗೆ ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. 

ಇನ್ನು ಇದೇ ವೇಳೆ ಏಪ್ರಿಲ್‌ ಏಪ್ರಿಲ್ ನಂತರ ಸಿಎಂ ಸ್ಥಾನದಿಂದ ಬಿಎಸ್​ವೈ ಕೆಳಗಿಳಿಯಲಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಗ್ಗೆ ಮಾತನಾಡಿದ ಯತ್ನಾಳ್,  ಯಡಿಯೂರಪ್ಪ, ಸಿದ್ದರಾಮಯ್ಯ ಬಹಳ ಆಪ್ತರು. ಹೀಗಾಗಿ ಬಿಎಸ್​ವೈ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎನ್ನುವ ವಿಚಾರ ಸಿದ್ದರಾಮಯ್ಯಗೆ ಗೊತ್ತಿರುತ್ತದೆ ಎಂದು ಹೇಳಿದರು.