ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಟಿಕೆಟ್‌ ಘೋಷಣೆ ಬೆನ್ನಿಗೆ ಪಕ್ಷದ ಭದ್ರ ನೆಲ ಕರಾವಳಿ ಬಿಜೆಪಿಯಲ್ಲಿ ಅಸಮಾಧಾನದ ಕಂಪನ ಶುರುವಾಗಿದೆ. ಸುಳ್ಯ ಹಾಗೂ ಪುತ್ತೂರುಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿರುವುದು, ಮಂಗಳೂರಲ್ಲಿ ಟಿಕೆಟ್‌ ನೀಡಿಕೆಯ ಅಸಮಾಧಾನ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಮಂಗಳೂರು/ಉಡುಪಿ (ಏ.13) : ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಟಿಕೆಟ್‌ ಘೋಷಣೆ ಬೆನ್ನಿಗೆ ಪಕ್ಷದ ಭದ್ರ ನೆಲ ಕರಾವಳಿ ಬಿಜೆಪಿಯಲ್ಲಿ ಅಸಮಾಧಾನದ ಕಂಪನ ಶುರುವಾಗಿದೆ. ಸುಳ್ಯ ಹಾಗೂ ಪುತ್ತೂರುಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿರುವುದು, ಮಂಗಳೂರಲ್ಲಿ ಟಿಕೆಟ್‌ ನೀಡಿಕೆಯ ಅಸಮಾಧಾನ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಸುಳ್ಯ ಶಾಸಕ, ಸಚಿವ ಅಂಗಾರ ಅವರು ರಾಜಕಾರಣದಿಂದ ನಿವೃತ್ತಿ ಘೋಷಿಸಿ, ಹೊಸ ಅಭ್ಯರ್ಥಿ ಪರ ಪ್ರಚಾರ ನಡೆಸುವುದಿಲ್ಲ ಎಂದಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಸದ್ಯ ಬೆಂಗಳೂರಿನಲ್ಲಿದ್ದು, ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಯೋಚನೆಯಲ್ಲಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ವಂಚಿತ ಸಂತೋಷ್‌ ಕುಮಾರ್‌ ಬೋಳ್ಯಾರ್‌ ಪ್ರಚಾರ ಕಾರ್ಯ ನಡೆಸಿದೆ ತಟಸ್ಥನಾಗಿ ಇರುವುದಾಗಿ ಹೇಳಿದ್ದಾರೆ. ಉಡುಪಿಯಲ್ಲಿ ರಘುಪತಿ ಭಟ್‌ ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್‌ ವಂಚಿತನಾಗಿರುವ ಬಗ್ಗೆ ಕಣ್ಣೀರು ಸುರಿಸಿದ್ದು, ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ತಿಳಿಸಿದ್ದಾರೆ.

ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಸುಳ್ಯದಲ್ಲಿ ಅಂಗಾರ ನಿವೃತ್ತಿ:

ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಬಿರುಕು ಬಿಡಲಾರಂಭಿಸಿದೆ. ಪಕ್ಷದಲ್ಲಿ 30 ವರ್ಷಕಾಲ ಶಾಸಕರಾಗಿದ್ದ ಅಂಗಾರ ಅವರು ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದಾರೆ. ಮಾತ್ರವಲ್ಲ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೂಡ ನಡೆಸುವುದಿಲ್ಲ ಎಂದಿದ್ದಾರೆ. ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿದ ನನ್ನನ್ನು ಈಗ ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಟಿಕೆಟ್‌ ನಿರಾಕರಣೆ ಬಗ್ಗೆ ಮೊದಲೇ ಹೇಳಿಲ್ಲ. ಗೌರವಯುತವಾಗಿ ನಿರ್ಗಮನಕ್ಕೆ ಅವಕಾಶ ನೀಡದೆ ಅವಮಾನಿಸಲಾಗಿದೆ ಎಂದು ಅತ್ತುಕೊಂಡಿದ್ದಾರೆ. ಇದು ಸುಳ್ಯದಲ್ಲಿ ಪಕ್ಷದ ಗೆಲುವಿಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಹೇಳಲಾಗಿದೆ.

ಅಂಗಾರ(S Angara) ಜತೆಗೆ ಅವರ ಬೆಂಬಲಿಗ ವೆಂಕಟ್‌ ವಳಲಂಬೆ ಕೂಡ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಂಗಾರ ಅವರಿಗೆ ಟಿಕೆಟ್‌ ನೀಡದೇ ಇರುವುದನ್ನು ವಿರೋಧಿಸಿ ಈ ನಿರ್ಧಾರ ತಳೆದಿರುವುದಾಗಿ ಅವರು ತಿಳಿಸಿದ್ದಾರೆ.

ಪುತ್ತೂರಲ್ಲಿ ವ್ಯಾಪಕ ಅಸಮಾಧಾನ:

ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಅವರು ಪುತ್ತೂರು ಕ್ಷೇತ್ರಕ್ಕೆ ಬುಧವಾರ ಮೊದಲ ಭೇಟಿ ನೀಡಿದಾಗ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನ ಎದುರಿಸಿದ್ದಾರೆ. ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೂ ಯಾರೊಬ್ಬ ಮುಖಂಡರೂ ಬರಮಾಡಿಕೊಳ್ಳಲು ಬಂದಿರಲಿಲ್ಲ ಎಂದು ತಿಳಿಯಲಾಗಿದೆ. ಬಳಿಕ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹಾಗೂ ರಾಜ್ಯ ವಕ್ತಾರ ಕ್ಯಾ.ಗಣೇಶ್‌ ಕಾರ್ಣಿಕ್‌ ಮಾತನಾಡಿದರೂ ಅಸಮಾಧಾನ ಬಗೆಹರಿದಿಲ್ಲ. ಅಭ್ಯರ್ಥಿ ಆಯ್ಕೆ ಪಕ್ಷದ ನಿರ್ಧಾರವಾಗಿದ್ದು, ಅದನ್ನು ಎಲ್ಲರೂ ಬೆಂಬಲಿಸುವಂತೆ ವಿನಂತಿಸಿದ್ದಾರೆ.

ಮುಖಂಡರಿಗೆ ಬೆಂಬಲಿಗರ ತರಾಟೆ:

ಪುತ್ತೂರು ಬಿಜೆಪಿ ಕಚೇರಿ ಸಭೆ ಬಳಿಕ ಜಿಲ್ಲಾಧ್ಯಕ್ಷ ಸುದರ್ಶನ್‌ ಹಾಗೂ ವಕ್ತಾರ ಗಣೇಶ್‌ ಕಾರ್ಣಿಕ್‌ ಅವರು ಶಾಸಕ ಸಂಜೀವ ಮಠಂದೂರು ಅವರ ಮನೆಗೆ ತೆರಳಿ ಸಮಾಧಾನ ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಕಾರ್ಯಕರ್ತರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಪಕ್ಷಕ್ಕಾಗಿ ದುಡಿಸಿ, ಟಿಕೆಟ್‌ ಭರವಸೆ ನೀಡಿ ಕೊನೆಗಳಿಗೆಯಲ್ಲಿ ಕೈಕೊಟ್ಟಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರಿಗೆ ಸ್ಥಳೀಯರನ್ನೇ ಅಭ್ಯರ್ಥಿಯಾಗಿ ಮಾಡಬೇಕೆಂದು ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರು ಪ್ರಸ್ತಾಪಿಸಿದ್ದರು. ಆದರೂ ಪಕ್ಷ ನಾಯಕರು ಇದನ್ನು ಕಡೆಗಣಿಸಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿಯಲಾಗಿದೆ. ಮೊದಲ ದಿನವೇ ಪುತ್ತೂರಲ್ಲಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಪ್ರಚಾರದಿಂದ ಕಾರ್ಯಕರ್ತರು ದೂರ ಉಳಿದಿದ್ದಾರೆ. ನಾಮಪತ್ರ ಸಲ್ಲಿಕೆಗೆ ದಿನ ಸಮೀಪಿಸುತ್ತಿದ್ದು, ಪುತ್ತೂರು ಬಿಜೆಪಿಯ ಅಸಮಾಧಾನ ಸರಿಪಡಿಸಲು ಪಕ್ಷ ಮುಖಂಡರು ಹೆಣಗಾಡುವಂತಾಗಿದೆ.

ಸಂಘಪರಿವಾರ ಕೂಡ ದೂರ?:

ಪುತ್ತೂರಿನಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಹೊಸಮುಖಕ್ಕೆ ಟಿಕೆಟ್‌ ನೀಡುವಾಗ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಸಂಘಪರಿವಾರ ಮುಖಂಡರು ಪ್ರಸ್ತಾಪ ಮಾಡಿದ್ದರು. ಸಂಘ ಪರಿವಾರದ ಪ್ರಸ್ತಾಪಕ್ಕೆ ಕಿಂಚಿತ್‌ ಮನ್ನಣೆ ಕೂಡ ಸಿಗಲಿಲ್ಲ. ಬಿಜೆಪಿಯ ನಾಯಕರ ಈ ಧೋರಣೆಗೆ ಬೇಸರ ವ್ಯಕ್ತಪಡಿಸಿರುವ ಸಂಘಪರಿವಾರ ನಾಯಕರು, ಈ ಬಾರಿ ಪ್ರಚಾರದಿಂದಲೇ ದೂರ ಇರಲು ನಿರ್ಧರಿಸಿದ್ದಾಗಿ ಹೇಳಲಾಗಿದೆ.

ಮಂಗಳೂರಲ್ಲಿ ಬೋಳ್ಯಾರ್‌ ತಟಸ್ಥ:

ಮಂಗಳೂರು ಕ್ಷೇತ್ರ(ಉಳ್ಳಾಲ)ದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಲ್ಲಿ ಜಿ.ಪಂ. ಮಾಜಿ ಸದಸ್ಯ ಸಂತೋಷ್‌ ಕುಮಾರ್‌ ಬೋಳ್ಯಾರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇವರಿಗೆ 2018ರಲ್ಲಿ ಪಕ್ಷ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ನ ಯು.ಟಿ.ಖಾದರ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿತ್ತು. ಟಿಕೆಟ್‌ಗೆ ಸಾಕಷ್ಟುಲಾಬಿ ನಡೆಸಿದ್ದ ಸಂತೋಷ್‌ ಕುಮಾರ್‌ ಅವರು ಈಗ ಟಿಕೆಟ್‌ ವಂಚಿತಗೊಂಡು ಅಭ್ಯರ್ಥಿ ಪರ ಪ್ರಚಾರ ನಡೆಸದೆ ತಟಸ್ಥವಾಗಿ ಇರುವ ಬೆದರಿಕೆ ತಂತ್ರ ಹಾಕಿದ್ದಾರೆ. ಈ ಕುರಿತು ಬುಧವಾರ ತೊಕ್ಕೊಟ್ಟಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಬ್ರಾಹ್ಮಣನೆಂಬ ಕಾರಣಕ್ಕೆ ಬಿಜೆಪಿ ನನಗೆ ಟಿಕೆಟ್‌ ನೀಡಿಲ್ಲ: ರಘುಪತಿ ಭಟ್‌

ಉಡುಪಿ : ತಾನು ಬ್ರಾಹ್ಮಣ ಎಂಬ ಕಾರಣಕ್ಕೆ ತನಗೆ ಟಿಕೆಟ್‌ ನಿರಾಕರಿಸಲಾಗಿದೆ, ಪಕ್ಷಕ್ಕೆ ತನ್ನ ಅಗತ್ಯವಿಲ್ಲ ಎಂದು ತೋರಿಸಲಾಗಿದೆ, ಪಕ್ಷದ ಈ ನಡೆಯಿಂದ ತೀವ್ರ ಬೇಸರವಾಗಿದೆ ಎಂದು ಉಡುಪಿ ಕ್ಷೇತ್ರದ ಟಿಕೆಟ್‌ ವಂಚಿತ ಶಾಸಕ ರಘುಪತಿ ಭಟ್‌(Raghupati bhat MLA) ಮಾಧ್ಯಮದವರ ಮುಂದೆ ಕಣ್ಣೀರು ಹಾಕಿದ್ದಾರೆ.

ಬುಧವಾರ ತಮ್ಮ ಮನೆಯಲ್ಲಿ ಕರೆದಿದ್ದ ಅಭಿಮಾನಿಗಳ ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಜಾತಿಯ ಕಾರಣಕ್ಕೆ ನನಗೆ ಟಿಕೆಟ್‌ ತಪ್ಪಿದೆ ಅನ್ನೋದು ಈಗ ಖಚಿತ ಆಗಿದೆ. ಆದರೆ ಹಾಗಂತ ನಾನು ಊಹೆ ಕೂಡ ಮಾಡಿರಲಿಲ್ಲ ಪಕ್ಷದ ನಾಯಕರು ನನ್ನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು, ಕೊನೆ ಗಳಿಗೆಯಲ್ಲಿ ಅವಕಾಶ ವಂಚನೆ ಮಾಡಿದ್ದಾರೆ ಎಂದರು.

ಈ ಬಾರಿ ಟಿಕೆಟ್‌ ಇಲ್ಲ ಎಂದು ಮೊದಲೇ ನಾಯಕರು ಕರೆ ಮಾಡಿ ತಿಳಿಸುತ್ತಿದ್ದರೆ, ಈಶ್ವರಪ್ಪ(KS Eshwarappa) ಅವರಂತೆ ನಾನೂ ಮಾನಸಿಕವಾಗಿ ಸಿದ್ಧನಾಗಿರುತ್ತಿದ್ದೆ, ಕೇಳಿದ್ದರೆ ನಾನೇ ರಾಜಿನಾಮೆ ನೀಡುತ್ತಿದ್ದೆ, ಟಿವಿ ನೋಡಿದ ಮೇಲೆ ನನಗೆ ಟಿಕೆಟ್‌ ಇಲ್ಲ ಅಂತ ಗೊತ್ತಾಗಿದೆ, ಪಕ್ಷಕ್ಕೆ ನಾನು ಇಷ್ಟೂಬೇಡವಾದನೆ ಎಂದು ಶಾಕ್‌ ಆಗಿದೆ ಎಂದರು. ಟಿಕೆಟ್‌ ಪಡೆದ ಯಶ್‌ಪಾಲ್‌ ಸುವರ್ಣ ನಾನು ಬೆಳೆಸಿದ ಹುಡುಗ, ಅವರಿಗೆ ಟಿಕೆಟ್‌ ನೀಡಿದ ಬಗ್ಗೆ ಸಂತೋಷವಿದೆ ಎಂದು ರಘುಪತಿ ಭಟ್‌ ಹೇಳಿದರು.

ಮೊದಲೇ ಹೇಳಿದ್ದರೆ ಈಶ್ವರಪ್ಪ ರೀತಿ ರಾಜೀನಾಮೆ ಕೊಡುತ್ತಿದ್ದೆ, ಟಿಕೆಟ್ ಕೈತಪ್ಪಿದ್ದಕ್ಕೆ ರಘುಪತಿ ಭಟ್ ಕಣ್ಣೀರು!

ಪಕ್ಷ ನನಗೆ ಅನೇಕ ಅವಕಾಶಗಳನ್ನು ಕೊಟ್ಟಿದೆ, ಪಕ್ಷದ ಕಷ್ಟಕಾಲದಲ್ಲಿ ಎದೆಯೊಡ್ಡಿ ಪಕ್ಷವನ್ನು ಬೆಳೆಸಿದ್ದೇನೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಇನ್ನು ಮುಂದೆಯೂ ಕಾರ್ಯಕರ್ತರ ಜೊತೆಗಿರುತ್ತೇನೆ. ಈಗ ನಾನು ಯಾವುದೇ ನಿರ್ಧಾರವನ್ನು ಪ್ರಕಟಿಸುವ ಸ್ಥಿತಿಯಲ್ಲಿ ಇಲ್ಲ. ಮುಂದೇನೂ ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಜಾತಿ ಆಧಾರಿತ ರಾಜಕೀಯ ನಡೆಯುವುದಿಲ್ಲ, ನಡೆಯುತ್ತಿದ್ದರೆ ಬೆರಳೆಣಿಕೆಯ ಜನರಿರುವ ಸಮುದಾಯದ ನಾನು 3 ಬಾರಿ ಶಾಸಕನಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.