ಬೆಂಗಳೂರು (ಮಾ.13):  ಸಿ.ಡಿ. ವಿವಾದದಲ್ಲಿ ಸಿಲುಕಿರುವ ರಮೇಶ್‌ ಜಾರಕಿಹೊಳಿ ಅವರಿಗೇ ಮತ್ತೆ ಸಚಿವ ಸ್ಥಾನ ನೀಡಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿಗಳ ಮುಂದೆ ಮತ್ತೊಮ್ಮೆ ಪ್ರಸ್ತಾಪಿಸಲು ಆಡಳಿತಾರೂಢ ಬಿಜೆಪಿಯಲ್ಲಿನ ಅವರ ಆಪ್ತ ಶಾಸಕರು ಸಿದ್ಧತೆ ನಡೆಸಿದ್ದಾರೆ.

ಸೋಮವಾರ ಅಥವಾ ಮಂಗಳವಾರ ಸುಮಾರು 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಮೇಶ್‌ ಜಾರಕಿಹೊಳಿ ವಿರುದ್ಧ ಸಿ.ಡಿ. ಸಂಚು ನಡೆದಿದೆ. ತಕ್ಷಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

HDK ಆಯ್ತು : ಜಾರಕಿಹೊಳಿ ಬೆಂಬಲಕ್ಕೆ ನಿಂತ ರೇವಣ್ಣ

ನಾಸ್ಕು ದಿನಗಳ ಹಿಂದಷ್ಟೇ ಶಾಸಕ ಮಹೇಶ್‌ ಕುಮಟಳ್ಳಿ ನೇತೃತ್ವದಲ್ಲಿ ಕೆಲವು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ರಮೇಶ್‌ ಜಾರಕಿಹೊಳಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಕು. ಅದಾಗದಿದ್ದರೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿ ಜಲಸಂಪನ್ಮೂಲ ಖಾತೆಯನ್ನೇ ಕೊಡಬೇಕು ಎಂಬ ಮನವಿ ಮಾಡಿದ್ದರು. ಆದರೆ, ಪ್ರಕರಣದ ತನಿಖೆ ನಡೆದು ಸತ್ಯಾಸತ್ಯತೆ ಹೊರಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಅವರು ತಿಳಿಸಿದ್ದರು.