ಸಿದ್ದು, ನಾನು ಒಂದೇ ಗರಡಿಯಲ್ಲಿ ಪಳಗಿದವರು: ವಿ.ಸೋಮಣ್ಣ
ವರುಣಕ್ಕೆ ವಿಜಯೇಂದ್ರ ಬರೋದಾದ್ರೆ ಕೆಂಪು ಹಾಸಿನ ಸ್ವಾಗತ ನೀಡುವೆ, 17ರಂದು ವರುಣ, 19ರಂದು ಚಾಮರಾಜನಗರ ಕ್ಷೇತಕ್ಕೆ ನಾಮಪತ್ರ ಸಲ್ಲಿಕೆ, ನಾನೊಂದು ಥರ ಜಿಗುಟು, ನನಗೆ ಸವಾಲೇ ಗೊತ್ತಿಲ್ಲ: ಸಚಿವ ಸೋಮಣ್ಣ
ಮೈಸೂರು(ಏ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಇಬ್ಬರು ಒಂದೇ ಗರಡಿಯಲ್ಲಿ ಪಳಗಿದವರು. ಅವರು ಎಂಥ ನಾಯಕರಾದರೂ ಇಲ್ಲಿ ನನ್ನಂತೆಯೇ ಒಬ್ಬ ಅಭ್ಯರ್ಥಿ ಅಷ್ಟೆ. ಪಕ್ಷದೊಳಗೆ ಯಾರೋ ಚಿಕ್ಕಪುಟ್ಟದಾಗಿ ಇಲ್ಲಸಲ್ಲದ್ದು ಮಾತಾಡುತ್ತಾರೆ. ಅದನ್ನು ದೊಡ್ಡದು ಮಾಡಬೇಡಿ ಎಂದು ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕ್ಷೇತ್ರ ಸವಾಲು ಎಂದು ಅನ್ನಿಸುತ್ತಿಲ್ಲ. ಏಕೆಂದರೆ ನನಗೆ ಸವಾಲೇ ಗೊತ್ತಿಲ್ಲ. ಯಾರೋ ಬಾಯಿ ಬಡಿದುಕೊಂಡರೆ ಅದರಿಂದ ಸೋಮಣ್ಣನಿಗೆ ಏನೂ ಇಲ್ಲ. ಸೋಮಣ್ಣ ಸೋಮಣ್ಣನೇ. ನಾನೊಂದು ಥರ ಜಿಗುಟು. ನನ್ನ ಮೇಲೆ ವಿಶ್ವಾಸವಿಟ್ಟು ನೋಡಿದರೆ ಗೊತ್ತಾಗುತ್ತದೆ. ನನ್ನ ನಡವಳಿಕೆಯನ್ನು ವರುಣ ಕ್ಷೇತ್ರದ ಜನ ಸ್ವಲ್ಪ ತಿಳಿದುಕೊಂಡಿದ್ದಾರೆ. ಕಾರ್ಯಕರ್ತರು ನನ್ನ ಬಗ್ಗೆ ತಿಳಿಸುತ್ತಾರೆ. ಅವರೇ ನಮ್ಮ ಪಕ್ಷದ ಶಕ್ತಿ. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನೀಡುವುದು ಬೇಡ ಎಂದು ನಾನು ಹೇಳಿಲ್ಲ. ಶಿಕಾರಿಪುರದಲ್ಲಿ ನಿಲ್ಲಲಿ ಎಂದು ನಮ್ಮ ನಾಯಕರಾದ ಯಡಿಯೂರಪ್ಪ ಅವರು ಹೇಳಿದ್ದರು. ಈಗ ಅವರು ವರುಣಕ್ಕೆ ಬರುತ್ತಾರೆ ಎಂದರೆ ಕೆಂಪು ಹಾಸಿನ ಸ್ವಾಗತ ನೀಡುತ್ತೇನೆ. ನನ್ನ ಮಗನಿಗೆ ಮಾತ್ರ ಟಿಕೆಟ್ ಕೈತಪ್ಪಿಲ್ಲ ಅನೇಕರ ಮಕ್ಕಳಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದರು.
ವರುಣಾ- ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರಾ, ಸೋಲ್ತಾರಾ? ಸ್ಪೆಷಲ್ ಟಾಸ್ಕ್ ಸೀಕ್ರೆಟ್ ಹೀಗಿದೆ..
ವರುಣ ಕ್ಷೇತ್ರಕ್ಕೆ ನಾನು ನೆಪಮಾತ್ರ. ಬಿಜೆಪಿಯಲ್ಲಿ ಯಾವ ಮುಖಂಡರು ಚಿಕ್ಕವರಲ್ಲ. ದೊಡ್ಡವರೂ ಅಲ್ಲ. ಎಲ್ಲಕ್ಕಿಂತ ಪಕ್ಷ ಮತ್ತು ಕಾರ್ಯಕರ್ತರು ದೊಡ್ಡವರು. ಎಲ್ಲರೂ ಸೇರಿಯೇ ನನ್ನನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ. ನಾನೇನೂ ಇಲ್ಲಿ ಶಾಶ್ವತ ಅಲ್ಲ. 75 ವರ್ಷವಾದ ಮೇಲೆ ನಮ್ಮ ಪಕ್ಷದಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ಹಾಗಂತ ಇದು ಕೊನೆ ಚುನಾವಣೆ, ರಾಜಕೀಯ ನಿವೃತ್ತಿ ಅಂತ ಏನೂ ಇಲ್ಲ. ಶುಕ್ರವಾರದಿಂದ ವರುಣದಲ್ಲಿ ಪ್ರಚಾರ ಆರಂಭಿಸುತ್ತೇನೆ. 17ರಂದು ವರುಣ ಮತ್ತು 19ರಂದು ಚಾಮರಾಜನಗರ ಕ್ಷೇತಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ವರಿಷ್ಠರು ಅಳೆದು, ಸುರಿದು ವರುಣ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನನಗೆ ಟಿಕೆಟ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಆಗಮಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೋರಿದ್ದೇನೆ. ಚೆನ್ನಾಗಿ ಕೆಲಸ ಮಾಡು ಎಂದು ಹೇಳಿ, ಸಿಹಿ ತಿನ್ನಿಸಿದ್ದಾರೆ. ಅವರು ಆಗಮಿಸುವ ನಿರೀಕ್ಷೆ ಇದೆ. ವರುಣದಲ್ಲಿ ನನ್ನ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎಂಬುದು ಗೌಣ. ಶುಕ್ರವಾರ, ಶನಿವಾರ ವರುಣ ಕ್ಷೇತ್ರದಲ್ಲಿದ್ದರೆ, ಇನ್ನೆರಡು ದಿನ ಚಾಮರಾಜನಗರ ಕ್ಷೇತ್ರದಲ್ಲಿರುತ್ತೇನೆ ಅಂತ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.