ಚಿಕ್ಕಬಳ್ಳಾಪುರ, (ಡಿ.31): ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಬಗ್ಗೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಈ ಬಗ್ಗೆ ಖುದ್ದು ಜೆಡಿಎಸ್ ವರಿಷ್ಠ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ವಿಲೀನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೀಗ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು, ಬಿಜೆಪಿಯ ರೈಲಿನ ಜೊತೆ ಜೆಡಿಎಸ್ ಬೋಗಿ ಸೇರಿದ್ರೆ ಅವರಿಗೂ ಒಳ್ಳೆಯದು, ರಾಜ್ಯಕ್ಕೂ ಒಳ್ಳೆಯದು ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಇಂದು (ಗುರುವಾರ) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪರಿಸ್ಥಿತಿಗೆ ತಲುಪಿದೆ ಅಂತ ದೇಶದ ಜನತೆಗೆ ಗೊತ್ತಿದೆ. ಆದರೆ ಜೆಡಿಎಸ್ ಪರಿಸ್ಥಿತಿ ಹಾಗಿಲ್ಲ. ಇನ್ನೂ ದಕ್ಷಿಣ ಕರ್ನಾಟಕದಲ್ಲಿ ಶಕ್ತಿ ಹೊಂದಿದೆ ಎಂದು ದಳಪತಿಗಳ ಪರ ಬ್ಯಾಟಿಂಗ್ ಮಾಡಿದರು. 

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿ ವಿರುದ್ಧ ತಿರುಗಿಬಿದ್ದ ದಳಪತಿಗಳು

ಜೆಡಿಎಸ್‌ನವರಿಗೆ ಯಾರ ಜೊತೆ ಇದ್ದರೆ ಒಳ್ಳೆಯದು ಎಂದು ಈಗಾಗಲೇ ಅರ್ಥವಾಗಿದೆ. ಅಂತಹ ರಾಜಕೀಯ ಧ್ರುವೀಕರಣ ಆದ್ರೆ ರಾಜ್ಯದ ಜನತೆ ಹಾಗೂ ಜೆಡಿಎಸ್‌ಗೂ ಒಳ್ಳೆಯದು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಜೊತೆ ಹೋದಾಗಲೆಲ್ಲಾ ಅವರ ಅಸ್ತಿತ್ವವೇ ಹಾಳಾಗಿದ್ದು, ತಮ್ಮ ಶಾಸಕರನ್ನ ಕಳೆದುಕೊಂಡಿದೆ. ಇದರಿಂದ ಜೆಡಿಎಸ್ ಗೆ ಇರುವ ಒಂದೇ ಅವಕಾಶವಿದ್ದು, ಬಿಜೆಪಿ ಜೊತೆ ಗುರುತಿಸಿಕೊಳ್ಳೋದ್ರಿಂದ ಅವರಿಗೆ ಲಾಭ ರಾಜ್ಯಕ್ಕೂ ಒಳಿತಾಗಲಿದೆ. ಬಿಜೆಪಿ ಜನರ ಪರ ಸರ್ಕಾರ ಅಂತ ಇಡೀ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಬಿಜೆಪಿ ರೈಲಿನ ಜೊತೆ ಹತ್ತಿಕೊಂಡವರು ದೆಹಲಿ ಸೇರ್ತಾರೆ ಇಲ್ಲ ಅಂದ್ರೆ ಹಳ್ಳಿಯಲ್ಲೇ ಉಳಿದು ಬಿಡ್ತಾರೆ ಎಂದರು.