Asianet Suvarna News Asianet Suvarna News

Karnataka Politics : ರಮೇಶ್‌ಕುಮಾರ್‌ ವಲಸೆ ಹೋಗ್ತಿರುತ್ತಾರೆ: ಒಂದು ಕಡೆ ನಿಲ್ಲಲ್ಲ

  • ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಒಂದು ರೀತಿ ಕೊಕ್ಕರೆ ಇದ್ದಂತೆ
  • ಒಂದು ಕಡೆಯಿಂದ ಮತ್ತೊಂದೆಡೆ ಹೋಗುತ್ತಿರುತ್ತಾರೆ. ಇಡೀ ಜೀವನವೇ ವಲಸೆ ಹೋಗುವುದೇ ಆಗಿದೆ 
Minister Sudhakar Slams Congress Leader ramesh kumar snr
Author
Bengaluru, First Published Dec 6, 2021, 8:37 AM IST

ಚಿಕ್ಕಬಳ್ಳಾಪುರ (ಡಿ.06):  ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ (Ramesh kumar) ಒಂದು ರೀತಿ ಕೊಕ್ಕರೆ ಇದ್ದಂತೆ, ಒಂದು ಕಡೆಯಿಂದ ಮತ್ತೊಂದೆಡೆ ಹೋಗುತ್ತಿರುತ್ತಾರೆ. ಇಡೀ ಜೀವನವೇ ವಲಸೆ ಹೋಗುವುದೇ ಆಗಿದೆ ಎಂದು ಆರೋಗ್ಯ ಸಚಿವ ಡಾ.ಆರ್‌.ಸುಧಾಕರ್‌ (Dr K Sudhakar ) ವ್ಯಂಗ್ಯವಾಡಿದ್ದಾರೆ.  ತಾಲೂಕಿನ ಗೋಪಿನಾಥ ಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರು ನೀತಿ ಪಾಠ ಹೇಳಿದಂತೆ ನಿಜ ಜೀವನದಲ್ಲಿ ಎಂದಾದರೂ ನಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ತಮ್ಮನ್ನು ಇತ್ತೀಚೆಗೆ ಫಕೀರ್‌ ಎಂದು ಜರಿದಿರುವ ಬಗ್ಗೆ ಪ್ರತಿಕ್ರಿಯಿಸಿ ಇವರಿಗೆ ಪಕೀರ್‌ ಆಗಲು ಯೋಗ್ಯತೆ ಇಲ್ಲ. ಈ ಹಿಂದೆ ಊರೂರು ಹೋಗುತ್ತಾರಲ್ಲಾ ಆ ರೀತಿ ಇವರು ಕೊಕ್ಕರೆಗಳಿದ್ದಂತೆ. ಅಂತಹವರು ಇಂದು ನೀತಿ ಪಾಠ ಹೇಳುತ್ತಾರೆ. ಅವರ ಬಗ್ಗೆ ಇಡೀ ಜಗತ್ತಿಗೆ ಅರ್ಥವಾಗಿದೆ ಎಂದರು.

ಅರಸು, ಗೌಡರಿಗೆ ಏನು ಮಾಡಿದರು?:  ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಎಲ್ಲಿಂದ ರಾಜಕೀಯ (Politics) ಪ್ರಾರಂಭ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಮಾಜಿ ಸಿಎಂ ದಿ.ದೇವರಾಜ ಅರಸು (Devaraju Arasu) ಅವರ ಹೆಸರು ಪದೇ ಪದೇ ಹೇಳುತ್ತಾರೆ. ಅರಸು ಅವರು ಬಿಟ್ಟು ಹೋದಾಗ, ಎಲ್ಲಿ ಹೋದರು, ಅವರ ಹಿಂದೆ ಹೋದರಾ? ಚಿಕ್ಕ ವಯಸ್ಸಿನಲ್ಲೇ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು (HD Devegowda) ಸ್ಪೀಕರ್‌ ಮಾಡಿದರು. ಆದರೆ ದೇವೇಗೌಡರು ಪದವಿಯಿಂದ ಇಳಿಯುತ್ತಿದ್ದಂತೆ ಎತ್ತ ಗಾಡಿ ಹತ್ತಿದರು ಎಂದು ಸಚಿವ ಸುಧಾಕರ್‌ ಪ್ರಶ್ನಿಸಿದರು.

ಜೈಲಿಗೆ ಕಳಿಸಲಿ :  ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ. ವಿಜಯಪುರ ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಸುಧಾಕರ್, ರಮೇಶ್ ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದರು. ಇದೀಗ ರಮೇಶ್ ಕುಮಾರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನನ್ನನ್ನು ಜೈಲಿಗೆ ಕಳಿಸುವುದಿದ್ರೆ ಕಳಿಸಲಿ. ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಜೈಲಿಗೆ ಹೋಗಲ್ಲ ಅಂದ್ರೆ ತಕರಾರು ಮಾಡ್ಬೇಕು ಎಂದು ತೀಕ್ಷ್ಣವಾಗಿ ಟಾಂಗ್ ಕೊಟ್ಟರು.

ಮುಂದಿನ ಸರ್ಕಾರ ಕಾಂಗ್ರೆಸ್‌ನದ್ದು : ಬಡ ಮಕ್ಕಳಿಗೆ ನೀಡಲಾಗುತ್ತಿರುವ ಕೋಳಿ ಮೊಟ್ಟೆಯನ್ನು (Egg) ಬೇಡ ಎನ್ನುವ ಮನುಸ್ಮೃತಿ ರಾಜಕಾರಣ (Politics)  ಮಾಡುತ್ತಿರುವ ಈ ರಾಜ್ಯ ಸರ್ಕಾರವನ್ನು(Karnataka govt) ಕಿತ್ತೊಗೆಯಬೇಕು ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ (Ramesh kumar) ಹೇಳಿದರು.  ಅವರು ಪಟ್ಟಣದ ಶ್ರೀ ರಂಗಂ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಕಾಂಗ್ರೆಸ್‌ (congress) ಘಟಕ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣಾ (MLC Election) ಪ್ರಚಾರ ಸಭೆಯಲ್ಲಿ ಮಾತನಾಡಿ, ಕೋಳಿ ಬೆಳೆಸುವವನು ರೈತ, ಕೋಳಿ ಮೊಟ್ಟೆ ತಿನ್ನುವುದು ಹಾಸ್ಟೆಲ್‌ನ ಬಡ ಮಕ್ಕಳು. ಅದನ್ನು ಬೇಡ ಎನ್ನುಲು ನೀವ್ಯಾರೂ. ರಾಜ್ಯದಲ್ಲಿ ಇಂತಹ ಮನುಸ್ಮೃತಿ ರಾಜಕಾರಣ ಮಾಡಲು ಕಾಂಗ್ರೆಸ್‌ (Congress) ಬಿಡುವುದಿಲ್ಲ ಎಂದು ಗುಡುಗಿದರು.

  ಇಂದಿನ ರಾಜ್ಯ ಸರ್ಕಾರ (Karnataka govt) ಬೇಕಾದರೆ ಗಂಟೆ ಹಿಡಿದು ಕೊಂಡು ಜುಟ್ಟು ಬಿಟ್ಟುಕೊಂಡು ಹೋಗಲಿ ಎಂದರು. ಇಂತಹ ಮನು ವಾದದ ಈ ರಾಜ್ಯ ಸರ್ಕಾರವನ್ನು ಜನತೆ ಕಿತ್ತು ಒಗೆಯಬೇಕು ಎಂದ ಮಾಜಿ ಸಭಾಪತಿಗಳು ರೈತರ ಬಗ್ಗೆ ದಮನಿತರ ಬಗ್ಗೆ ಕಿಂಚಿತ್ತು ಯೋಚಿಸದ ಸರ್ಕಾರವು ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದರು.ಇಂದಿರಾ ಗಾಂಧಿ (Indira Gandhi), ಅಂಬೇಡ್ಕರ್‌ ಆಶಯಗಳನ್ನು ನಾವು ಮುಂದುವರೆಸುತ್ತೇವೆ ಎಂದ ರಮೇಶ್‌ ಕುಮಾರ್‌ (Ramesh Kumar) ಅವರು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ನಿರ್ಮಿಸುವ ಚಿಂತನೆ ಕಾಂಗ್ರೆಸ್‌ ಪಕ್ಷದಾಗಿದೆ. ಅದನ್ನು ರಾಜ್ಯದಲ್ಲಿ ಮುಂಬರಲಿರುವ ನಮ್ಮ ಸರ್ಕಾರ ಮೂಲಕ ಮಾಡೇ ತೀರುತ್ತೇವಿ ಎಂದರು. ಪೂರ್ವದಲ್ಲಿ ಸೂರ‍್ಯ ಹುಟ್ಟುವಷ್ಟೇ ಸತ್ಯ ಮುಂದಿನ ಸರ್ಕಾರ ಕಾಂಗ್ರೆಸ್‌ ಆಗಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಕೋಲಾರ (Kolar) ಜಿಲ್ಲೆ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದು,ನಾಯಕರ ಭಿನ್ನಾಭಿಪ್ರಾಯದಿಂದ ಇತರ ಪಕ್ಷಕ್ಕೆ ಅವಕಾಶ ಸಿಕ್ಕಿತ್ತು. ಈಗ ಪಕ್ಷದ ಎಲ್ಲ ಮುಖಂಡರುಗಳು ಒಗ್ಗಟ್ಟಾಗಿರುವುದರಿಂದ ಭದ್ರ ಕೋಟೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದರು.

ನಿಮ್ಮ ಯೋಗ ಕ್ಷೇಮಕ್ಕೆ ನಿಲ್ಲುವವ ನಾನು:  ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಾನು ಅಧಿಕಾರಕ್ಕೆ ಬಂದಾತ. ತಾಲೂಕಿನಲ್ಲಿ ಎಲ್ಲ ಅಧಿಕಾರಗಳು ಜೆಡಿಎಸ್‌ (JDS), ಬಿಜೆಪಿ (BJP) ಪಾಲಾಗಿತ್ತು. ಆದರೆ ಪ್ರತಿ ಹಂತ ಜನ ಪ್ರತಿನಿಧಿಗಳೂಡನೆ ಉತ್ತಮ ಬಾಂಧವ್ಯ ಬೆಳೆಸಿಕೊಂಡ ಹಿನ್ನೆಲೆಯಲ್ಲಿ ಹಾಲಿ ಇರುವ 500ಕ್ಕೂ ಹೆಚ್ಚು ಮತದಾರರಲ್ಲಿ 400ಕ್ಕೂ ಹೆಚ್ಚು ನಮ್ಮ ಪರವಾಗಿ ನಿಂತಿದ್ದಾರೆ. ಹಣದಿಂದ ನಿಮ್ಮನ್ನು ಖರೀದಿಸಲು ಹೊರಟ್ಟಿರುವವರು ನಿಮ್ಮನ್ನು ಮರೆಸುವುದು ಈ ಚುನಾವಣೆಯ ಮತದಾನ ತನಕ. ಆದರೆ ನಂತರವೂ ನಿಮ್ಮ ಯೋಗ ಕ್ಷೇಮಕ್ಕೆ ನಿಲ್ಲುವವನ್ನು ನಾನು ಮಾತ್ರ ಎಂದು ಮರೆಯಬೇಡಿ ಎಂದರು.

ಜಿಲ್ಲಾ ಉಸ್ತುವಾರಿ ಬಿ.ಕೆ.ಹರಿಪ್ರಸಾದ್‌, ಶಾಸಕ ಶಿವಶಂಕರ ರೆಡ್ಡಿ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಅಭ್ಯರ್ಥಿ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಡಾ.ಎಂ.ಸಿ.ಸುಧಾಕರ್‌, ಎ.ನಾಗರಾಜ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಹಲವು ಮುಖಂಡರು ಮಾಜಿ ಶಾಸಕ ಎ.ನಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದರು.

ಎಂಎಲ್‌ಸಿ ನಜೀರ್‌ ಅಹಮದ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂದನ್‌, ವಿಜಯನರಸಿಂಹ, ಆಶೋಕ್‌ ಕುಮಾರ್‌, ಲಕ್ಷ್ಮೇನಾರಾಯಣ್‌, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಅಶ್ವತ್ಥ ರೆಡ್ಡಿ, ಪ್ರವೀಣ್‌,ನವೀನ್‌, ಲಿಂಗಾಪುರ ಕಿಟ್ಟಿ, ಆನೇಪುರ ಹನುಮಂತಪ್ಪ, ಎಂ.ವಿ.ಹನುಮಂತಪ್ಪ, ಅಂಜನಿ ಸೋಮಣ್ಣ, ಮುನಿರಾಜು ಇನ್ನಿತತರು ಇದ್ದರು.

Follow Us:
Download App:
  • android
  • ios