* ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಸೋಮಶೇಖರ್ ಆಕ್ರೋಶ* ಬೆಂಗಳೂರು ಲಾಕ್‌ಡೌನ್ ಸ್ಥಿತಿ ನಿರ್ಮಿಸಲು ಯತ್ನ* ಕಾಂಗ್ರೆಸ್‌ಗೆ ಜನ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ
ಬೆಂಗಳೂರು(ಜ.12): ಪಾದಯಾತ್ರೆ(Padayatra) ಹೆಸರಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್(Congress) ಕೊರೋನಾ ಹರಡುವ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಮುಖಾಂತರ ಬೆಂಗಳೂರಿಗೆ(Bengaluru) ಕೊರೋನಾ(Coronavirus) ಹಬ್ಬಿಸಿ ಲಾಕ್‌ಡೌನ್(Lockdown) ಮಾಡುವ ಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಕರ್ನಾಟಕವನ್ನು(Karnataka) ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿದೆ ಎಂದೂ ಅವರು ಆಪಾದಿಸಿದ್ದಾರೆ.
ಜನರ ಜೀವ ರಕ್ಷಣೆ ಹೊಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ನಾಗರಿಕರ ಹಿತ ಕಾಯಬೇಕು. ಕೋವಿಡ್‌ನಂತಹ(Covid19) ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಂತು ಸಲಹೆಗಳನ್ನು ನೀಡಿ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಪಾದಯಾತ್ರೆ ಹೆಸರಿನಲ್ಲಿ ಕೊರೋನಾ ಹರಡಿ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ, ಕಾಂಗ್ರೆಸ್ ಪಾದಯಾತ್ರೆ ಹೆಸರಿನಲ್ಲಿ ಜನರ ಗುಂಪು ಕಟ್ಟಿಕೊಂಡು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದೆ ಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.
Congress Padayatre ಕ್ವಾರಂಟೈನ್ ಮಾಡಲು ಕೊರೋನಾ ಸೋಂಕಿತ ಅಧಿಕಾರಿಯನ್ನ ಡಿಕೆಶಿ ಬಳಿ ಕಳುಹಿಸಿದ್ರಾ?
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ(HM Revanna) ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರ ಜತೆ ಹೆಜ್ಜೆ ಹಾಕಿದವರಿಗೂ ಸೋಂಕು ಹರಡಲಿದೆ. ಪಾದಯಾತ್ರೆ ಎಂಬ ಜನಜಾತ್ರೆಯಿಂದ ಬೆಂಗಳೂರಿಗೆ ಕೋವಿಡ್ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿಯೂ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
2013ರಿಂದ 2019ರ ವರೆಗೆ ಅಧಿಕಾರದಲ್ಲಿದ್ದು ಕಾಲಹರಣ ಮಾಡಿದ ಕಾಂಗ್ರೆಸ್(Congress) ಪಕ್ಷ ಈಗ ಪಾದಯಾತ್ರೆ ನಾಟಕವಾಡುತ್ತಿದೆ. ಆದರೆ, ಈ ಪಾದಯಾತ್ರೆ ಕಾಂಗ್ರೆಸ್‌ನ ಹಲವು ನಾಯಕರಿಗೆ ಇಷ್ಟವಿಲ್ಲ. ಹೀಗಾಗಿ ಇದು ಒನ್ ಮ್ಯಾನ್ ಶೋನಂತಾಗಿದೆ. ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ(Politics) ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ಗೆ ಈ ರಾಜ್ಯದ ಜನ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಕೋವಿಡ್‌ನಿಂದ ಮುಂದಾಗುವ ಹಾನಿಗೆ ಕಾಂಗ್ರೆಸ್ ನಾಯಕರೇ ನೇರ ಕಾರಣವಾಗಲಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.
ಹೆದರಿಸಿ ಪಾದಯಾತ್ರೆ ನಿಲ್ಲಿಸಲಾಗದು: ಸಿದ್ದು
ಕೇಸು ಹಾಕಿ ನಮ್ಮನ್ನು ಹೆದರಿಸುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಪಿಯವರ(BJP) ಮೂರ್ಖತನ. ಕಾನೂನು ಹೋರಾಟದ ಮೂಲಕವೇ ಇದಕ್ಕೆ ಉತ್ತರ ಕೊಡುತ್ತೇವೆ. ಮೇಕೆದಾಟು ಪಾದಯಾತ್ರೆ(Mekedatu Padayatra) ಕಾವು ಜೋರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆದಿಯಾಗಿ ಬಿಜೆಪಿಗರಿಗೆ ಭಯ ಶುರುವಾಗಿದೆ. ಹೀಗಾಗಿಯೇ ಬೆಂಗಳೂರು ಪ್ರವೇಶಿಸದಂತೆ ಲಾಕ್‌ಡೌನ್(Lockdown) ವಿಧಿಸುವ ತಂತ್ರ ಹೂಡುತ್ತಿದ್ದಾರೆ. ಏನೇ ಮಾಡಿದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ಬೇಕಿದ್ದರೆ ಜೈಲಿಗೆ ಹಾಕಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಗುಡುಗಿದ್ದಾರೆ.
ಪಾದಯಾತ್ರೆ ಉದ್ಘಾಟನೆ ನಂತರ ಜ್ವರದಿಂದ ಬಳಲಿ ವಿಶ್ರಾಂತಿಗೆ ತೆರಳಿದ್ದ ಸಿದ್ದರಾಮಯ್ಯ ಮಂಗಳವಾರ ಯಾತ್ರೆಗೆ ಹಿಂತಿರುಗಿದರು. ಮೂರನೇ ದಿನದ ಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಮ(Covid Rules) ಪಾಲಿಸಿಲ್ಲ ಎಂದು ನಾನು ಸೇರಿದಂತೆ ನಮ್ಮ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಸಾವಿರಾರು ಜನರ ಸೇರಿಸಿ ಪ್ರತಿಭಟನೆ, ವಿವಿಧ ಕಾರ್ಯಕ್ರಮಗಳನ್ನು ಮಾಡಿದ ಅವರದೇ ಪಕ್ಷದ ಸುಭಾಷ್ ಗುತ್ತೇದಾರ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ ಇವರೆಲ್ಲರ ಮೇಲೆ ಕೇಸು ಯಾಕೆ ದಾಖಲಿಸಿಲ್ಲ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದರು. ಅಲ್ಲೆಲ್ಲೂ ಕೊರೋನಾ ಇರಲಿಲ್ಲ, ನಮ್ಮ ಪಾದಯಾತ್ರೆಯಿಂದ ಕೊರೋನಾ(Coronavirus) ಹರಡುತ್ತಾ ಎಂದು ತರಾಟೆಗೆ ತೆಗೆದುಕೊಂಡರು.
