ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ. ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜನರ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಶಿರಸಿ (ಡಿ.07): ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ. ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜನರ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಅವರು ಮಾಧ್ಯಮದವರ ಜತೆ ಮಾತನಾಡಿ, ಕೇವಲ ಕಾಂಗ್ರೆಸ್ ನಾಯಕರು ಬ್ರೇಕ್ ಫಾಸ್ಟ್ ಮಾಡಿದರೆ ಸಾಲುವುದಿಲ್ಲ. ಜನರಿಗೂ ಬ್ರೇಕ್ ಫಾಸ್ಟ್ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆಯಾಗಬೇಕು. ಬೆಂಗಳೂರಿನ ವಿಷಯ ಇಲ್ಲಿ ಚರ್ಚೆ ಬೇಡ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಉತ್ತರ ಕರ್ನಾಟಕ ರೈತರ, ದಲಿತರ ಅನೇಕ ಸಮಸ್ಯೆಗಳಿದ್ದು, ಅಭಿವೃದ್ಧಿ ಆಗಿಲ್ಲ. ನೀರಾವರಿ ಸಮಸ್ಯೆಗಳಿವೆ. ರೈತರ ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ನಮಗೆ ನ್ಯಾಯ ನೀಡದಿದ್ದರೆ ಬೇರೆ ರಾಜ್ಯ ಕೇಳುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಉತ್ತರ ಭಾಗಕ್ಕೆ ನ್ಯಾಯ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ. ಈ ಎಲ್ಲ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಬೇಕಿದೆ ಎಂದರು.
ಅಧಿಕಾರದ ಕಿತ್ತಾಟದಲ್ಲಿ ಜನರ ಸಮಸ್ಯೆ ಬದಿಗಿಡಬಾರದು, ರಾಜ್ಯಕ್ಕೆ ಅನ್ಯಾಯ ಮಾಡಬಾರದು. ವಾಚ್ ವಿಚಾರವಾಗಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡುವುದು ಬೇಡ, ನನ್ನ ಚಾಲೆಂಜ್‌ನಿಂದ ಅಧಿಕಾರ ತಪ್ಪುತ್ತದೆ. ಆ ಅನ್ಯಾಯ ಮಾಡಲು ನಾನು ತಯಾರಿಲ್ಲ. ಅದಕ್ಕೆ ನಾನು ಚಾಲೆಂಚ್ ಸ್ವೀಕಾರ ಮಾಡುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರಿಗೆ ನೂರು ವಾಚ್ ಕಟ್ಟುವಷ್ಟು ಶಕ್ತಿ ಭಗವಂತ ನೀಡಿದ್ದಾನೆ. ಅವರು ರಾಜೀನಾಮೆ ನೀಡಿದರೆ ಬಹಳ ಅನ್ಯಾಯವಾಗುತ್ತದೆ. ಅದು ನನಗೆ ಶಾಪ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಯಾರೂ ನನಗೆ ಅವಾಜ್ ಹಾಕಿಲ್ಲ
ಸರ್ಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡಲು ಬಿಜೆಪಿಯಲ್ಲಿ ನಾಯಕರಿಲ್ಲ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ ಅಭಿಪ್ರಾಯಕ್ಕೆ ಉತ್ತರ ನೀಡುವುದಿಲ್ಲ. ಅವರು ಪಕ್ಷದಲ್ಲಿದ್ದರೆ ಅವರ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿ. ಅವರು ಈಗ ನಮ್ಮ ಪಕ್ಷದಲ್ಲಿಲ್ಲ. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾರೂ ನನಗೆ ಅವಾಜ್ ಹಾಕಿಲ್ಲ. ಅವರು ಯಾವ ಉದ್ದೇಶಕ್ಕೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಪ್ರಜ್ಞೆ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿ. 45 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಎಲ್ಲಿ ಮಾತನಾಡಬೇಕು ಎಂಬುದು ಗೊತ್ತಿದೆ. ಯತ್ನಾಳ ಇದ್ದಾಗ ಗೌರವಿಸಿದ್ದೇನೆ. ಈಗಲೂ ಗೌರವಿಸುತ್ತೇನೆ. ಅವರ ಹೇಳಿಕೆ ಸ್ವಂತದ್ದಾಗಿದೆ ಎಂದು ಹೇಳಿದರು.


