ಬಾಗಲಕೋಟೆ, (ಫೆ.12): ಸಚಿವ ಆನಂದ್ ಸಿಂಗ್ ಅವರು ರೆಡ್ಡಿ ಬ್ರದರ್ಸ್ ತೀವ್ರ ವಿರೋಧದ ನಡುವೆಯೇ ಅವರ ವಿರುದ್ಧ ತೊಡೆತಟ್ಟಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೇ ಬಳ್ಳಾರಿ ಉಸ್ತುವಾರಿಯಾಗಿ ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದು, ಶ್ರೀರಾಮುಲು ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ಮಾತಿಗೆ ಸಿಎಂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎನ್ನಲಾಗುತ್ತಿದೆ.

ವಿಜಯನಗರ ಜಿಲ್ಲೆಯಾದ ಮರುದಿನವೇ ಆನಂದ್‌ ಸಿಂಗ್‌ಗೆ ಮತ್ತೊಂದು ಗೆಲುವು

ಆನಂದ್ ಸಿಂಗ್ ಅವರ ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಿರುವುದರಿಂದ ಶ್ರೀರಾಮುಲು ಹಾಗೂ ರೆಡ್ಡಿ ಬ್ರದರ್ಸ್, ಸಿಎಂ ನಡೆಗೆ ಅಸಮಾಧಾನಗೊಂಡಿದ್ದಾರೆ. 

ಇನ್ನು ಈ ಬಗ್ಗೆ ಸಚಿವ ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದು, ಬಳ್ಳಾರಿ ಜಿಲ್ಲೆ ವಿಭಜನೆಯಿಂದ ನಾನು ಮಂಕಾಗಿಲ್ಲ. ಚೆಂಡಿನಂತೆ ಪುಟಿದು ಮೇಲೆ ಬರುವ ಶಕ್ತಿ ಈ ಶ್ರೀರಾಮುಲುಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾದಾಮಿ ತಾಲ್ಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಸಚಿವ ಆನಂದಸಿಂಗ್ ಮೇಲುಗೈ ಸಾಧಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಬಳ್ಳಾರಿ ಜಿಲ್ಲೆ ವಿಭಜನೆಯಿಂದ ನಾನು ಮಂಕಾಗಿಲ್ಲ. ಈ ವಿಚಾರದಲ್ಲಿ ರಾಮುಲು ಹಿಂದೆ ಸರಿದಿದ್ದಾರೆ ಅಂತನೂ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಆ ಪಕ್ಷವನ್ನು ಒಬ್ಬ ಶ್ರೀರಾಮುಲು ಎನ್ನುವ ವ್ಯಕ್ತಿ ನೆಲಸಮ ಮಾಡಿದ್ದಾನೆ ಅಂದರೆ ಅದು ಬಿಜೆಪಿಯ ಶಕ್ತಿ ಎಂದರು.

ರಾಮುಲು ಅವರನ್ನು ಯಾರೂ ಸಹ ಕುಗ್ಗಿಸಲು ಆಗಲ್ಲ. ರಾಮುಲು ಕೇವಲ ಒಂದು ತಾಲೂಕು, ಜಿಲ್ಲೆಯ ಲೀಡರ್ ಅಲ್ಲ. ಈ ಶ್ರೀರಾಮುಲು ರಾಜ್ಯ ಮಟ್ಟದ ಲೀಡರ್ ಆಗಿದ್ದಾನೆ. ಚಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ ಹಾಗೆಯೇ ಚೆಂಡಿನಂತೆಯೇ ವೇಗವಾಗಿ ಮೇಲೆ ಜಿಗಿಯುವ ಶಕ್ತಿಯನ್ನು ದೇವರು ಮತ್ತು ನಾಡಿನ ಜನರು ಕೊಟ್ಟಿದ್ದಾರೆ ಎಂದು ಹೇಳಿದರು.