ಮೋದಿಯವರ ದೂರದೃಷ್ಟಿಯಿಂದ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಸೋಮಣ್ಣ ಹೇಳಿದರು. ತಮಗೆ ಉಸ್ತುವಾರಿ ನೀಡಿದ್ದ ಕ್ಷೇತ್ರದಲ್ಲೂ ಗೆಲುವು ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯಾಧ್ಯಕ್ಷರ ಬದಲಾವಣೆ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು ಎಂದರು. ದೆಹಲಿ ಕಚೇರಿ ಉದ್ಘಾಟನೆ ಬಗ್ಗೆ ಹಬ್ಬಿರುವ ಸುದ್ದಿಗಳನ್ನು ಅಲ್ಲಗಳೆದರು. ಕಾಂಗ್ರೆಸ್ಸಿನ ಇಲ್ಲಸಲ್ಲದ ಆರೋಪಗಳನ್ನು ಟೀಕಿಸಿದರು.
ದಾವಣಗೆರೆ (ಫೆ.9): ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಚಿಂತನೆಯಿಂದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ನನಗೆ ಉಸ್ತುವಾರಿ ಕೊಟ್ಟಿದ್ದ ನಾಗಲೋಯಿ ಜಾಟ್ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಈ ಹಿಂದೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಚಿಂತನೆಯಿಂದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ದೆಹಲಿ ಜನರು ತೀರ್ಮಾನ ಮಾಡಿಯೇ ಬಿಜೆಪಿಯನ್ನು ಭರ್ಜರಿಯಾಗಿ ಗೆಲ್ಲಿಸಿದ್ದಾರೆ. ದೆಹಲಿಯಲ್ಲಿ ನನಗೂ ಒಂದು ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದರು. ಆ ಕ್ಷೇತ್ರದಲ್ಲೂ ನಮ್ಮ ಪಕ್ಷ ಗೆದ್ದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದೆಹಲಿ ಸಂಭಾವ್ಯ ಸಿಎಂ ಅಭ್ಯರ್ಥಿಗಳ ಕಿರು ಪರಿಚಯ
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ವರಿಷ್ಠರಿಗೆ ಬಿಟ್ಟದ್ದು: ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಪಕ್ಷದ ಸಮಿತಿ, ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಅದು ನಾಲ್ಕು ಗೋಡೆ ಮಧ್ಯೆ ತೀರ್ಮಾನವಾಗುತ್ತದೆ ಎಂದು ಇದೇ ವೇಳೆ ಸೋಮಣ್ಣ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಪಕ್ಷದ ರಾಷ್ಟ್ರೀಯ ನಾಯಕರು ಎಂದರು.
ದೆಹಲಿಯಲ್ಲಿ ಕಚೇರಿ ಉದ್ಘಾಟನೆ ವಿಚಾರಕ್ಕೆ ಉಪ್ಪು-ಹುಳಿ-ಖಾರವನ್ನು ಹಾಕಲಾಗುತ್ತಿದೆ. ಅಲ್ಲಿ ಯಾವುದೇ ಲಿಂಗಾಯತ ನಾಯಕರ ಸಭೆಯೂ ನಡೆದಿಲ್ಲ. ನಾನು ಯಾರನ್ನೂ ಕರೆದಿಲ್ಲ, ನಮ್ಮ ನೆಂಟರನ್ನೇ ಕರೆದಿಲ್ಲ. ಕೇಂದ್ರ ಸಚಿವರನ್ನು ಮಾತ್ರ ಕರೆದಿದ್ದೇನೆ. ಆದರೂ, ಅಲ್ಲಿ ಸಭೆ ಮಾಡಿದ್ದೆನೆಂದು ಉಪ್ಪು, ಹುಳಿ, ಖಾರ ಹಾಕಲಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಟೀಂ, ಮತ್ತೊಂದು ಟೀಂ ಬಂದಿತ್ತು ಅಂತೆಲ್ಲಾ ಉಪ್ಪು, ಹುಳಿ, ಖಾರವನ್ನೆಲ್ಲಾ ಹಾಕಿ, ಸುದ್ದಿ ಹರಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಪಕ್ಷದಲ್ಲಿನ ಈ ಎಲ್ಲಾ ಗೊಂದಲ ಸರಿಯಾಗಲಿದೆ ಎಂದರು.
Delhi New CM Live: ಯಾರಾಗ್ತಾರೆ ದೆಹಲಿ ಮುಖ್ಯಮಂತ್ರಿ? ಬಿಜೆಪಿ ಹೈಕಮಾಂಡ್ ಒಲವು ಯಾರತ್ತ?
ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಕೇಂದ್ರ ಸರ್ಕಾರದಿಂದ ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಅದಕ್ಕೂ ಆರೋಪ, ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಕಣ್ಣಿನ ಪೊರೆ ತೆಗೆದು ನೋಡಬೇಕಿದೆ. ಈಗ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಕೈಲಾಗದವರು ಮೈಪರಚಿಕೊಂಡರು ಎಂಬಂತೆ ಕಾಂಗ್ರೆಸ್‌ನವರು ಈಗ ವರ್ತಿಸುತ್ತಿದ್ದಾರೆ ಎಂದು ಸೋಮಣ್ಣ ಟೀಕಿಸಿದರು.
ರಾಜ್ಯಕ್ಕೂ ಅನೇಕ ರೈಲ್ವೆ ಯೋಜನೆಗಳನ್ನು ನೀಡಲಾಗಿದೆ. ಈ ಬಜೆಟ್‌ನಲ್ಲಿ ಅತಿ ಹೆಚ್ಚು ಹಣವನ್ನು ನೀಡಲಾಗಿದೆ. ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಮಾರ್ಗವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ, ನಾಯಕತ್ವ ಜನರಿಗೂ ಇಷ್ಟವಾಗಿದೆ ಎಂದು ಅವರು ಹೇಳಿದರು.
