ವರ್ಗಾವಣೆ ಹಿಂದಿನ ಯಾವ ಸರ್ಕಾರದಲ್ಲೂ ಆಗಿಲ್ವೇ?: ಶಿವರಾಜ ತಂಗಡಗಿ ಪ್ರಶ್ನೆ
ಪೂರ್ಣ ಬಹುಮತದ ಸರ್ಕಾರ ಬಂದಿದ್ದರಿಂದ ಜೆಡಿಎಸ್ಸಿನ ಕುಮಾರಸ್ವಾಮಿಗೆ ಕೆಲಸ ಇಲ್ಲದಂತಾಗಿದೆ. ಅತಂತ್ರ ಸರ್ಕಾರ ಬಂದಿದ್ದರೆ ಆ ಸರ್ಕಾರ ಬಂದರೂ ನಾನೇ ಬೇಕು, ಈ ಸರ್ಕಾರ ಬಂದರೂ ನಾನೇ ಬೇಕು ಎನ್ನುತ್ತಿದ್ದರು. ಆದರೆ, ಈಗ ಅದಕ್ಕೆ ಅವಕಾಶ ಇಲ್ಲದಂತಾಗಿದೆ. ಅವರಿಗೆ ಸಹಿಸಿಕೊಳ್ಳಲು ಆಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾಗಿದ್ದ ವೇಳೆ ಒಂದೇ ಅಧಿಕಾರಿಯನ್ನು ಏಳು ಬಾರಿ ವರ್ಗಾವಣೆ ಮಾಡಿದ್ದನ್ನು ನೆನಪಿಸಿಕೊಳ್ಳಲಿ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ(ಆ.06): ವರ್ಗಾವಣೆ ಇದೇ ಸರ್ಕಾರದಲ್ಲಿ ಆಗುತ್ತಿದೆಯೇ? ಹಿಂದೆ ಯಾವತ್ತೂ ವರ್ಗಾವಣೆ ಆಗಿಯೇ ಇಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಾರವಾಗಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣ ಬಹುಮತದ ಸರ್ಕಾರ ಬಂದಿದ್ದರಿಂದ ಜೆಡಿಎಸ್ಸಿನ ಕುಮಾರಸ್ವಾಮಿಗೆ ಕೆಲಸ ಇಲ್ಲದಂತಾಗಿದೆ. ಅತಂತ್ರ ಸರ್ಕಾರ ಬಂದಿದ್ದರೆ ಆ ಸರ್ಕಾರ ಬಂದರೂ ನಾನೇ ಬೇಕು, ಈ ಸರ್ಕಾರ ಬಂದರೂ ನಾನೇ ಬೇಕು ಎನ್ನುತ್ತಿದ್ದರು. ಆದರೆ, ಈಗ ಅದಕ್ಕೆ ಅವಕಾಶ ಇಲ್ಲದಂತಾಗಿದೆ. ಅವರಿಗೆ ಸಹಿಸಿಕೊಳ್ಳಲು ಆಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾಗಿದ್ದ ವೇಳೆ ಒಂದೇ ಅಧಿಕಾರಿಯನ್ನು ಏಳು ಬಾರಿ ವರ್ಗಾವಣೆ ಮಾಡಿದ್ದನ್ನು ನೆನಪಿಸಿಕೊಳ್ಳಲಿ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ: ಸಲೀಂ ಅಹ್ಮದ್
ನಾನು ಮುಂಬೈ, ದೆಹಲಿಗೆ ಹೋಗುವುದನ್ನು ಕೆಲವರು ಪ್ರಶ್ನಿಸುತ್ತಾರೆ. ಮುಂಬೈಗೆ ಮಲಗಲು ಹೋಗಿಲ್ಲ. ಅಲ್ಲಿ ಗಡಿನಾಡ ಕನ್ನಡಿಗರ ಕಾರ್ಯಕ್ರಮಕ್ಕೆ ತೆರಳಿದ್ದೆ ಎನ್ನುವುದು ಗೊತ್ತಿರಲಿ ಎಂದರು.
ಬಸವರಾಜ ಧಡೇಸ್ಗೂರು ಮೊದಲು ಕನ್ನಡವನ್ನು ಸರಿಯಾಗಿ ಕಲಿತು ಮಾತನಾಡಲಿ. ಕನ್ನಡಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡುವುದನ್ನು ಬಿಡಲಿ. ಇನ್ನು ಯಾರು ಏನು ಮಾಡುತ್ತಿದ್ದಾರೆ ? ಎನ್ನುವುದನ್ನು ಕ್ಷೇತ್ರದ ಮತದಾರರು ಚೆನ್ನಾಗಿಯೇ ನೋಡುತ್ತಾರೆ. ಯಾರಿಗೆ ಪಾಠ ಕಲಿಸಬೇಕು ಎನ್ನುವುದು ಜನರಿಗೆ ಗೊತ್ತಿದೆ. ನಿಮ್ಮಿಂದ ನಾವು ಕಲಿಯಬೇಕಾಗಿಲ್ಲ ಎಂದರು.
ರಾಹುಲ್ ಗಾಂಧಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಜಯ ಆಗುವ ಮೂಲಕ ಸತ್ಯಕ್ಕೆ ಜಯ ದೊರೆತಂತಾಗಿದೆ. ಆಡಿಕೊಳ್ಳುವವರ ಬಾಯಿಗೆ ಬೀಗ ಬಿದ್ದಿದೆ. ಕೇವಲ ಮೋದಿ ಉಪನಾಮ ಬಳಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರಿಗೆ ಅಪಮಾನ ಮಾಡಲಾಯಿತು. ಆದರೆ, ಈ ಕೆಲಸವನ್ನು ಬಿಜೆಪಿಯವರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಈಗ ಆರಗ ಜ್ಞಾನೇಂದ್ರ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಉತ್ತರ ಕರ್ನಾಟಕದವರನ್ನು ಅಪಮಾನ ಮಾಡಿದ್ದಾರೆ. ನಮ್ಮ ಹಿರಿಯರಾದ ಖರ್ಗೆ ತೇಜೋವಧೆ ಮಾಡಿದ್ದಾರೆ. ಇಂಥವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಉತ್ತರ ಕರ್ನಾಟಕದ ಜನರು ಇಂಥವರನ್ನು ಕ್ಷೇತ್ರದಲ್ಲಿ ಓಡಾಡಲು ಬಿಡಬಾರದು ಎಂದರು.
ನಾನು ಸ್ಪರ್ಧೆ ಮಾಡಲ್ಲ:
ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆ ಪ್ರಶ್ನೆಯೇ ಈಗ ಉದ್ಭವಿಸುವುದಿಲ್ಲ. ಹಾಗೊಂದು ವೇಳೆ ಪಕ್ಷ ತೀರ್ಮಾನ ಮಾಡಿದರೆ ಮುಂದೆ ನೋಡಿದರಾಯಿತು. ನಾನಂತೂ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿಜಯಪುರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಸುಳ್ಳು. ಅಂಥ ಯಾವುದೇ ಬೆಳವಣಿಗೆ ಇದುವರೆಗೂ ಆಗಿಲ್ಲ ಎಂದರು.
ವರ್ಗಾವಣೆ ಹಿಂದೆ 1000 ಕೋಟಿ ದಂಧೆ: ಎಚ್‌ಡಿಕೆ ಮತ್ತೆ ಬಾಂಬ್!
ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದಿಸೆಯಲ್ಲಿ ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗೆದ್ದೇ ಗೆಲ್ಲುತ್ತೇವೆ ಎಂದರು.
ಹಿರಿಯರಾದ ಬಸವರಾಜ ರಾಯರಡ್ಡಿ ನಮ್ಮ ಮಾರ್ಗದರ್ಶಕರು. ಅವರು ಸಲಹೆ ನೀಡಿದ್ದನ್ನು ಸ್ವಾಗತ ಮಾಡುತ್ತೇವೆ. ಅವರು ಅಸಮಾಧಾನದಿಂದ ಏನೂ ಹೇಳಿಲ್ಲ. ಹೀಗಾಗಿ, ಅವರು ಹಿರಿಯರಾಗಿರುವುದರಿಂದ ನಾವು ಸಲಹೆಯನ್ನು ಸ್ವಾಗತ ಮಾಡುತ್ತೇವೆ ಎಂದರು. ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತಿತರರು ಇದ್ದರು.