ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ನಾವು ಪಕ್ಷವನ್ನು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಡುತ್ತೇವೆ. ನಾವು ಬೇಡ ಅಂದರೂ ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ವಿಜಯಪುರ (ಡಿ.03): ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ನಾವು ಪಕ್ಷವನ್ನು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಡುತ್ತೇವೆ. ನಾವು ಬೇಡ ಅಂದರೂ ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಡಿಸಿಎಂ-ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬ್ರೇಕ್‌ಫಾಸ್ಟ್ ಮೀಟಿಂಗ್‌ ಕರೆದದ್ದು ಬಹಳ ಒಳ್ಳೆಯದಾಯ್ತು, ದೇವರು ಇಬ್ಬರಿಗೂ ಒಳ್ಳೆಯ ಬುದ್ಧಿ ಕೊಡಲಿ. ಇಬ್ಬರು ಸೇರಿಕೊಂಡು ಮಾಧ್ಯಮಗಳಿಗೆ ನೀಡುತ್ತಿರುವ ಆಹಾರ ಬಂದ್ ಆಗಲಿ ಎಂದು ಆಶಿಸಿದರು.

ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ರೈತರ ಹೋರಾಟ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾನು ಪತ್ರ ಬರೆದು ಮನವಿ ಮಾಡಿದ್ದೇನೆ. ಬಿಜೆಪಿ ಸಂಸದರು ಕರ್ನಾಟಕವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಕೇಂದ್ರಕ್ಕೆ ಎಷ್ಟೇ ಪತ್ರ ಬರೆದರೂ ನಮಗೆ ಮಾತುಕತೆಗೆ ಕರೆಯುತ್ತಿಲ್ಲ ಎಂದು ಬೇಸರಿಸಿದರು. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಚಿಂತನೆ ಕುರಿತು ಈಗಾಗಲೇ ಸಿಎಂ, ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. 140 ಶಾಸಕರು ನಾವು ಒಗ್ಗಟ್ಟಾಗಿದ್ದೇವೆ. ಬಿಜೆಪಿಗೆ ಬೇಗ ಗದ್ದುಗೆ ಏರುವ ಆತುರತೆವಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಸೀಮಿತ

ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ಮಾಧ್ಯಮಗಳೇ ಇದರ ಬಗ್ಗೆ ಅಧ್ಯಯನ ಮಾಡಲಿ ಎಂದರು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ₹1800 ಹಾಗೂ ₹2000 ಇದೆ. ಇದನ್ನು ಏಕೆ ಬಿಜೆಪಿ ನಾಯಕರು ಕೇಂದ್ರಕ್ಕೆ ಪ್ರಶ್ನೆ ಮಾಡೋದಿಲ್ಲ?. ಬೊಮ್ಮಾಯಿ ಅವರು ರೈತರ ಜೊತೆಗೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ಅಧಿವೇಶನದಲ್ಲಿ ನಾಳೆ ಪ್ರಸ್ತಾಪ ಮಾಡಲಿ. ಕೊನೆ ಪಕ್ಷ ಮಾಧ್ಯಮಗಳಿಗಾದರೂ ಬೊಮ್ಮಾಯಿ ಹೇಳಿಕೆ ನೀಡಲಿ ಎಂದು ಆಗ್ರಹಿಸಿದರು.