ರೈತರು, ಕಾರ್ಖಾನೆಯವರು ಜಗಳವಾಡುತ್ತ ಕೂರಬಾರದು. ಇದರಿಂದ ರಾಜ್ಯದ ಉತ್ಪನ್ನ ಹಾಳಾಗುತ್ತದೆ. ಸಂಘರ್ಷದ ನಡುವೆ ಇಬ್ಬರಿಗೂ ಲಾಭವಾಗಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.
ವಿಜಯಪುರ (ನ.06): ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ದರ ದಂಗಲ್ ಇಲ್ಲ. ರೈತರು, ಕಾರ್ಖಾನೆಯವರು ಜಗಳವಾಡುತ್ತ ಕೂರಬಾರದು. ಇದರಿಂದ ರಾಜ್ಯದ ಉತ್ಪನ್ನ ಹಾಳಾಗುತ್ತದೆ. ಸಂಘರ್ಷದ ನಡುವೆ ಇಬ್ಬರಿಗೂ ಲಾಭವಾಗಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು. ರೈತರು ಕಬ್ಬಿಗೆ ₹ 3500 ಬೆಲೆ ನಿಗದಿಗೊಳಿಸಬೇಕು ಎಂದು ಹೋರಾಟ ನಡೆಸುತ್ತಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಂಗಳೂರಿಗೆ ಬಂದರೆ ಕಾರ್ಖಾನೆ ಮಾಲೀಕರನ್ನು ಕರೆಯುತ್ತೇನೆ. ಸಿಎಂ ಅವರಿಗೂ ಭೇಟಿಯಾಗೋಣ ಎಂದು ರೈತರಿಗೆ ಆಹ್ವಾನ ಕೊಟ್ಟರು.
₹ 3500 ದರಕ್ಕೆ ರೈತರ ಬೇಡಿಕೆ ವಾಸ್ತವಿಕವಾಗಿ ಸತ್ಯವಿದೆ. ಎಷ್ಟು ಹೆಚ್ಚಿಗೆ ಕೊಡಿಸುತ್ತೇವೆಯೋ ಅಷ್ಟು ರೈತರಿಗೆ ಸಂತೋಷ ಎಂದರು.ಕೊಡಿಸುವ ಪಾಲಿಸಿ ಮಾಡಿರೋದು ಕೇಂದ್ರ ಸರ್ಕಾರ. ಎಫ್‌ಆರ್‌ಪಿ ದರ ನಿಗದಿ ಮಾಡಿರುವವರೆ ನಿಮ್ಮ ಜೊತೆಗೆ ಬಂದು ಭಾಷಣ ಮಾಡುತ್ತಿದ್ದಾರೆ. ಹೋರಾಟಕ್ಕೆ ಬಂದವರಿಗೆ ಕೇಂದ್ರಕ್ಕೆ ಮನವರಿಕೆ ಮಾಡೋದಕ್ಕೆ ಹೇಳಿ. ಅವರು ಏನ್ ಕೊಡುತ್ತಾರೆ, ನಾನು ಅದನ್ನೇ ಕೊಡಿಸುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಮಾಲೀಕ ಬೇರೆ ಡ್ರೈವರ್ ಬೇರೆ. ನಾನು ಡ್ರೈವರ್ ಅಷ್ಟೇ. ಹೋರಾಟಕ್ಕೆ ಬಂದ ಅವರು ಎಫ್‌ಆರ್‌ಪಿ ದರ ನಿಗದಿ ಮಾಡಿಸಲಿ. ನಾನು ದರ ಕೊಡಿಸುತ್ತೇನೆ. ಎಫ್‌ಆರ್‌ಪಿ ಕಡಿಮೆ ಇದ್ದರೂ ₹ 3200 ಕೊಡಿಸುತ್ತಿದ್ದೇವೆ. ಒಂದು ಹೆಜ್ಜೆ ಮುಂದೆ ಬಂದು ಪ್ರಯತ್ನ ಮಾಡಿದ್ದೇವೆ. ₹3200 ದರ ಕೊಡಿಸೋಕೆ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಲೀಡ್ ತೆಗೆದುಕೊಂಡಿದ್ದಾರೆ. ಡಿಸಿಗಳ ಮೇಲೆ ನಂಬಿಕೆ ಇರಲಿ, ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಹೇಳಿದರು. ರೈತ ಆತ್ಮಹತ್ಯೆಗೆ ಯತ್ನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಯವಿಟ್ಟು ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಇದು ಹೋರಾಟದ ಸ್ವರೂಪ ಅಲ್ಲ. ಸರ್ಕಾರ ನಿಮ್ಮ ಜೊತೆಗಿದೆ. ಸಂಘರ್ಷ ಬಿಡಿ ಸಾಮರಸ್ಯಕ್ಕೆ ಬನ್ನಿ. ಕಾರ್ಖಾನೆಗೆ ಕಲ್ಲು ಹೊಡೆದರೆ ದರ ಸಿಗಲ್ಲ. ಕಲ್ಲು ಹೊಡೆದು ವಾಹನ ಜಖಂ ಮಾಡೋದು ಸರಿಯಲ್ಲ ಎಂದು ಮನವಿ ಮಾಡಿದರು.
ನಿರಾಣಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ
ಸರ್ಕಾರ ಸಕ್ಕರೆ ಲಾಬಿಗೆ ಮಣೆ ಹಾಕಿದೆ ಎನ್ನುವ ವಿಚಾರ ಹಾಗೂ ರಾಜಕಾರಣಿಗಳದ್ದೆ ಫ್ಯಾಕ್ಟರಿ ವಿಚಾರಕ್ಕೆ ಉತ್ತರಿಸಿ, ನನ್ನದು ಯಾವುದೇ ಫ್ಯಾಕ್ಟರಿ ಇಲ್ಲ. ನಾನು ನ್ಯೂಟ್ರಲ್ ಮನುಷ್ಯ. ಸಕ್ಕರೆ ಕಾರ್ಖಾನೆ ಪರ ನ್ಯಾಯ ಮಾಡೋದಿಲ್ಲ. ಏನೇ ಸಮಸ್ಯೆ ಇದ್ದರೂ ಪರಿಹಾರ ಮಾಡುತ್ತೇವೆ ಎಂದರು. ಕೇಂದ್ರದ ಬಳಿ ನಿಯೋಗ ಕೊಂಡೊಯ್ಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಲ್ಲೆ, ರಾಜ್ಯದ ರೈತರಿಗೆ ಸಹಾಯವಾಗುತ್ತೆ ಎನ್ನುವುದಾದರೆ ಬಿಜೆಪಿ, ಕಾಂಗ್ರೆಸ್ ನೋಡಲ್ಲ. ನಿರಾಣಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಡಾಕ್ಯುಮೆಂಟ್ ನನ್ನ ಬಳಿ ಇವೆ. ಸಿಸ್ಮಾ ಅಧ್ಯಕ್ಷರೇ ಬಿಜೆಪಿಯವರು, ಕೇಂದ್ರ ಅವಕಾಶ ಕೊಟ್ಟರೆ ಖಂಡಿತ ಭೇಟಿಯಾಗಲು ತಯಾರಿರುವುದಾಗಿ ತಿಳಿಸಿದರು.
ತಪ್ಪು ಗ್ರಹಿಕೆಯಿಂದ ಮುಂದುವರಿಯುವುದು ಬೇಡ. ವಿಜಯೇಂದ್ರ ತಮ್ಮ ಪಕ್ಷದ ಪದಾಧಿಕಾರಿಗಳನ್ನು ಕರೆದು ಕೇಳಲಿ. ರಾಜ್ಯ ಸರ್ಕಾರದ ತಪ್ಪಿದೆ ಎಂದರೆ ಮುಂದುವರೆಯಲಿ. ತಪ್ಪಿದ್ದರೆ ಖಂಡಿತ ತಲೆ ಬಾಗುತ್ತೇನೆ. ತಪ್ಪು ಗ್ರಹಿಕೆ ರೈತರಿಗೆ ಯಾರು ಕೊಡುತ್ತಿದ್ದಾರೆ ಗೊತ್ತಿಲ್ಲ. ರೈತರ ತಲೆಯಲ್ಲಿ ಏನಿದೆ ತಿಳಿಯುತ್ತಿಲ್ಲ. ನಾನು ರೈತರಲ್ಲಿ ಕೈಮುಗಿದು ಕೇಳುತ್ತೇನೆ. ಸಾಮರಸ್ಯದಿಂದ ಸಮಸ್ಯೆ ಬಗೆಹರಿಸೋಣ. ರಾಜ್ಯದಲ್ಲಿ ಅರ್ಧದಷ್ಟು ಕಬ್ಬು ನುರಿಸಿ ಆಗಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಹೆಚ್ಚಿನ ದರ ಬೇಕು ಅನ್ನೋದು ನನ್ನ ಹಾಗೂ ರೈತನ ಆಸೆ. ಹಿಂದೆ ಟನ್ ಕಬ್ಬಿಗೆ ₹ 700 ಸಹ ನೀಡುತ್ತಿರಲಿಲ್ಲ, ಇಂದು ₹ 1700 ಕೊಡುತ್ತಿದ್ದೇವೆ, ಇನ್ನೊಂದಿಷ್ಟು ಡಿಮ್ಯಾಂಡ್ ಮಾಡಿ ಬಗೆಹರಿಸಿಕೊಳ್ಳಿ.
- ಶಿವಾನಂದ ಪಾಟೀಲ, ಕೃಷಿ ಮಾರುಕಟ್ಟೆ ಸಚಿವ
