ಮೊಟ್ಟೆ ಖರೀದಿಯಲ್ಲಿ ಲಂಚ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ
* ಮೊಟ್ಟೆ ಖರೀದಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕಿಕ್‌ಬ್ಯಾಕ್ ಪಡೆದ ಆರೋಪ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಒತ್ತಾಯ
* ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟ ಶಶಿಕಲಾ ಜೊಲ್ಲೆ
ಬೆಂಗಳೂರು, (ಜು. 24): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಮೊಟ್ಟೆ ಖರೀದಿಯಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಇದರ ನೈತಿಕ ಹೊಣೆಹೊತ್ತು ಜೊಲ್ಲೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆ, ಮುಖಂಡರುಗಳು ಆಗ್ರಹಿಸಿದ್ದಾರೆ.
ಅನಾಥ ಮಕ್ಕಳ ಪಾಲಿಗೆ ತಾಯಿಯಾದ ಶಶಿಕಲಾ ಜೊಲ್ಲೆ
ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದು, ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
ಒಬ್ಬ ಮಹಿಳೆಯಾಗಿ ನನಗೆ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಅವಕಾಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ನನ್ನನ್ನು ಆರೋಪಿತಳನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಖಾಸಗಿ ವಾಹಿನಿಯಲ್ಲಿ ಹೇಳುತ್ತಿರುವ ಹಾಗೆ ಮೊಟ್ಟೆ ಖರೀದಿಗೆ ಇದುವರೆಗೂ ಯಾವುದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿ ಅವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಮಹಿಳೆಯರು, ಮಕ್ಕಳು, ವೃದ್ಧರು, ವಿಕಲಚೇತನರ ಏಳಿಗೆಗಾಗಿ ನಿರಂತರವಾಗಿ ನಾನು ಶ್ರಮಿಸುತ್ತಿದ್ದೇನೆ ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಉಂಟಾದ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲದೆ ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಲು ಕ್ರಮ ವಹಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿವರಿಸಿದ್ದಾರೆ.