ಸಿದ್ದು ನಮ್ಮ ಸಿಎಂ, ಆದ್ರೆ 5 ವರ್ಷನೋ 3 ವರ್ಷನೋ ಗೊತ್ತಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಮತ್ತೊಬ್ಬರ ವಿಚಾರ ನಾನು ಹೇಳಲು ಆಗುವುದಿಲ್ಲ. ರಾಜಕಾರಣಿಗಳು ಒಂದೆಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷ ಏನೂ ಇಲ್ಲ. ಮೈಸೂರು ಭೇಟಿಯಲ್ಲೂ ಯಾವುದೇ ವಿಶೇಷ ಇಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಮೈಸೂರು(ಅ.09): ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಐದು ವರ್ಷ ಇರ್ತಾರೋ, ಮೂರು ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಆ ಕುರಿತು ಮಾಹಿತಿ ಬೇಕಿದ್ದರೆ ಹೈಕಮಾಂಡ್ ಅನ್ನೇ ಕೇಳ ಬೇಕು. ಆದರೆ ಸಿದ್ದರಾ ಮಯ್ಯ ಅವರೇ ನಮ್ಮ ಮುಖ್ಯ ಮಂತ್ರಿಗಳು. ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿದ್ದರಾಮಯ್ಯ ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂಥ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ ಅಷ್ಟೆ ಎಂದರು.
ಮುಡಾ ಸಂಕಷ್ಟದಲ್ಲಿ ಸಿದ್ದರಾಮಯ್ಯ:ರಾಜೀನಾಮೆ ಕೊಟ್ಟು ಕಳಂಕದಿಂದ ಹೊರ ಬರಲಿ ಎಂದ ವರುಣಾ ಕ್ಷೇತ್ರದ ಜನ!
ಮುಖ್ಯಮಂತ್ರಿ ಸ್ಥಾನದ ಚರ್ಚೆ ಬಂದಾಗ ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆಯಾಗಲಿ, ಬೆಳವಣಿಗೆಗಳಾಗಲಿ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಬೆಂಬಲಿಗರು ತಮ್ಮ ನಾಯಕರಿಗೆ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಹಾಕೋದು ಸಾಮಾನ್ಯ. ಅದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಅನ್ನುವುದು ಸರಿಯಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ವಿಚಾರ ಕುರಿತು ಪ್ರಶ್ನೆಗೆ, ಮತ್ತೊಬ್ಬರ ವಿಚಾರ ನಾನು ಹೇಳಲು ಆಗುವುದಿಲ್ಲ. ರಾಜಕಾರಣಿಗಳು ಒಂದೆಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷ ಏನೂ ಇಲ್ಲ. ಮೈಸೂರು ಭೇಟಿಯಲ್ಲೂ ಯಾವುದೇ ವಿಶೇಷ ಇಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.