ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯನ್ನು ಖಂಡಿಸಿ ಸಚಿವ ಸಂತೋಷ್ ಲಾಡ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲು ಎಸ್‌ಐಟಿ ತನಿಖೆಗೆ ಸ್ವಾಗತ ಕೋರಿ, ಈಗ ಪ್ರತಿಭಟನೆ ನಡೆಸುವುದು ದ್ವಂದ್ವ ನಿಲುವು ಎಂದು ಆರೋಪಿಸಿದ್ದಾರೆ.  

ಧರ್ಮಸ್ಥಳದಲ್ಲಿ ನಡೆದಿರುವ ಬಿಜೆಪಿ ಪ್ರತಿಭಟನೆ ಕುರಿತು ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯೆ ನೀಡಿ ಬಿಜೆಪಿ ನಾಯಕರ ನಡೆ, ಅವರ ಪ್ರತಿಭಟನೆ ಹಾಗೂ ತನಿಖಾ ಪ್ರಕ್ರಿಯೆಯ ಬಗ್ಗೆ ಪ್ರಶ್ನೆ ಎತ್ತಿ, ಬಿಜೆಪಿ ವಿರುದ್ಧ ಕಿಡಿಕಾರಿದರು. ಎಸ್‌ಐಟಿ ರಚಿಸಿದಾಗ ಇದೇ ಬಿಜೆಪಿ ನಾಯಕರು ಅದನ್ನು ಸ್ವಾಗತಿಸಿದ್ದರು. ಆಗಲೇ ಅವರು ವಿರೋಧಿಸಬೇಕಿತ್ತು, ಏಕೆ ಸ್ವಾಗತ ಮಾಡಿದರು? ರಾತ್ರೋ ರಾತ್ರಿ ಯಾರಾದರೂ ಒಬ್ಬ ವ್ಯಕ್ತಿ ಬಂದು ಹೇಳಿಕೆ ನೀಡುತ್ತಾರೆ, ಅದು ಕೋರ್ಟ್‌ಗೆ ಹೋಗುತ್ತದೆ, ತನಿಖೆಗೆ ಬರುತ್ತದೆ. ನಂತರ ಅದೇ ವಿಷಯವನ್ನು ಮರೆತು, ಈಗ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಎಂದು ಪ್ರಶ್ನಿಸಿದರು.

ಷಡ್ಯಂತ್ರದ ವಾಸನೆ, ಆದರೆ ನಾವು ಓಪನ್ ಹಾರ್ಟ್‌ನಿಂದ ಸ್ವಾಗತಿಸಿದ್ದೇವೆ

ಈ ಪ್ರಕರಣದಲ್ಲಿ ಷಡ್ಯಂತ್ರ (ಕಾನ್ಸ್ಪಿರೆಸಿ) ಇರಬಹುದು. ಆದರೂ ನಾವು ಓಪನ್ ಹಾರ್ಟ್‌ನಿಂದ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದೇವೆ. ಇದೊಂದು ಧರ್ಮಸ್ಥಳವಲ್ಲ, ಸತ್ಯ ಹೊರಬರುವ ತನಿಖಾ ಪ್ರಕ್ರಿಯೆ. ಆದರೂ ರಾತ್ರೋ ರಾತ್ರಿ ಯಾರಾದರೂ ಬಂದು ಹೇಳಿಕೆ ನೀಡಿದರೆ ಅದನ್ನು ವಿಶ್ವಮಟ್ಟಕ್ಕೆ ಎತ್ತಿ ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಮೊದಲಿಗೆ ಸ್ವಾಗತ ಮಾಡಿದವರು, ಈಗ ತಮಗೆ ಬೇಕಾದಂತೆ ಪೊಲಿಟಿಕಲ್ ಮೈಲೇಜ್ ಪಡೆಯಲು ವಿರೋಧಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿಯವರಿಗೆ ಬೇರೆ ವಿಚಾರಗಳಿಲ್ಲ

ಸಂತೋಷ್ ಲಾಡ್ ಬಿಜೆಪಿ ನಾಯಕರ ಮೇಲೆ ತೀವ್ರ ಟೀಕೆ ಮಾಡಿ, "ಬಿಜೆಪಿಯವರಿಗೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಏನೂ ಇಲ್ಲ. ಇಂತಹ ವಿಷಯಗಳನ್ನು ಹಿಡಿದುಕೊಂಡೇ ಅವರು ಸದಾ ಪ್ರತಿಭಟನೆ ಮಾಡುತ್ತಾರೆ. ಬಿಹಾರ ಚುನಾವಣೆ ಯಾವ ವಿಷಯದ ಮೇಲೆ ನಡೆಯಿತು? ಅಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆಯಾಯಿತೇ? ಇಲ್ಲ, ಸಿಂಧೂರ್, ಧಾರ್ಮಿಕ ವಿಷಯಗಳ ಮೇಲೆ ಚುನಾವಣೆ ನಡೆದವು. ಎಷ್ಟು ಎಂಜಿನಿಯರಿಂಗ್ ಸೀಟುಗಳನ್ನು ಕೊಟ್ಟಿರಿ? ಎಷ್ಟು ಉದ್ಯೋಗ ಸೃಷ್ಟಿಸಿದೆವು ಎಂದು ಕೇಳಿದರೆ ಮೌನವಾಗುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಗಿಂತ ರಾಜಕೀಯ ಲಾಭವೇ ಮುಖ್ಯ," ಎಂದು ಕಿಡಿಕಾರಿದರು.

ದೇಶದಲ್ಲಿ ಪ್ರಚಾರಕರೊಬ್ಬನೇ ಪ್ರಧಾನಿಯೇನಾ?

ಇವರೊಬ್ಬರೇ ದೇಶದ ಪ್ರಚಾರಕರು ಎನ್ನುವಂತೆ ಮಾಡಲಾಗಿದೆ. ಪ್ರಧಾನಿಗೆ ಬೇರೆ ಕೆಲಸವೇ ಇಲ್ಲವೆ? ಪ್ರತಿಯೊಂದು ಚುನಾವಣೆಗೆ ಭಾಷಣ ಮಾಡಲು ಹೋಗಬೇಕೆ? ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರಲಾರರಾ? ಏಕೆ ಸದಾ ಪ್ರಧಾನಿಯನ್ನೇ ಮುಂದಿರಿಸುತ್ತಾರೆ?" ಎಂದು ಲಾಡ್ ಕಿಡಿಕಾರಿದರು. ಧರ್ಮಸ್ಥಳದ ವಿಚಾರವನ್ನು ಹಿಡಿದು ಬಿಜೆಪಿ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದರು. ಮೊದಲು ತನಿಖೆಗೆ ಸ್ವಾಗತ ಕೊಟ್ಟವರು, ಈಗ ತಿರುಗಿ ಪ್ರತಿಭಟನೆ ಮಾಡುತ್ತಿರುವುದು ದ್ವಂದ್ವ ನಿಲುವಿನ ಉದಾಹರಣೆ. ಜನರಿಗೆ ನಿಜವಾದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ಬಗ್ಗೆ ಉತ್ತರ ಕೊಡುವ ಬದಲು ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರಗಳನ್ನು ಎತ್ತಿ ಹಿಡಿಯುತ್ತಿರುವುದು ಬಿಜೆಪಿ ರಾಜಕಾರಣದ ನೈಜ ಮುಖ" ಎಂದು ಲಾಡ್ ವಾಗ್ದಾಳಿ ನಡೆಸಿದರು.