ಧರ್ಮಸ್ಥಳ ವಿಷಯದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಗರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಹೇಳಿದರು.

ಹುಬ್ಬಳ್ಳಿ (ಆ.24): ಧರ್ಮಸ್ಥಳ ವಿಷಯದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಗರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಇದರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿ ಅವರೇ ಮೊದಲು ಎಸ್ಐಟಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಎಸ್‌ಐಟಿ ರಚನೆ ಮಾಡಿದಾಗ ಸ್ವಾಗತಿಸಿದ್ದರು. ಕೋರ್ಟ್‌ ಆದೇಶದಂತೆ ಎಸ್‌ಐಟಿ ರಚನೆ ಮಾಡಲಾಗಿತ್ತು.

ಈಗಾಗಲೇ ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಗೆ ಬರಲಿದೆ. ಅಲ್ಲಿವರೆಗೂ ಕಾಯಬೇಕು ಎಂದರು. ಈ ತನಿಖೆಯ ಬಗ್ಗೆ ಸರ್ಕಾರ ಸಾರ್ವಜನಿಕರಿಗೆ ವಿಸ್ತೃತವಾಗಿ ತಿಳಿಸಬೇಕಾಗುತ್ತದೆ. ಮಾಸ್ಕ್‌ಮ್ಯಾನ್ ಹೇಳಿದ ಕಡೆಗಳಲ್ಲಿ ಗುಂಡಿ ತೋಡಲಾಯಿತು. ಎರಡು ವಾರ, ಮೂರು ವಾರ ಆದರೂ ಯಾವುದೇ ಹೆಣ ಸಿಗಲಿಲ್ಲ. ಅಕಸ್ಮಾತಾಗಿ ಹೆಣಗಳು ಸಿಕ್ಕಿದ್ದರೆ ಬಿಜೆಪಿಗರು ಏನು ಹೇಳುತ್ತಿದ್ದರು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಚಿವ ಸಂತೋಷ ಲಾಡ್‌ಗೆ ರೈತನ ಭಾವುಕ ಮನವಿ: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರೊಬ್ಬರು ಸಚಿವ ಸಂತೋಷ ಲಾಡ್ ಅವರ ಕಾಲುಗಳಿಗೆ ನಮಸ್ಕರಿಸಿ, ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಭಾವುಕವಾಗಿ ಬೇಡಿಕೊಂಡರು. ಕೂಡಲೇ ಸ್ಪಂದಿಸಿದ ಸಚಿವರು, ಅವರಿಗೆ ಸಾಂತ್ವನ ಹೇಳಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿ ಮಾನವೀಯತೆ ಮೆರೆದರು.

ಸಚಿವರ ಭರವಸೆ: ನಂತರ ಮಾತನಾಡಿದ ಲಾಡ್, ಹಾನಿಯಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಅವರಿಗೆ ಕೈ ಮುಗಿದು ಬೇಡಿ, ರೈತರಿಗೆ ನೆರವಾಗಲು ಸಹಕರಿಸುತ್ತೇನೆ ಎಂದು ಹೇಳಿದರು. ನಂತರ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 15,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 12,500 ಹೆಕ್ಟೇರ್‌ಗಿಂತಲೂ ಹೆಚ್ಚು ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಎರಡನೇ ಬಾರಿ ಬಿತ್ತನೆ ಮಾಡಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಣ್ಣೆಹಳ್ಳಕ್ಕೆ ಶಾಶ್ವತ ಪರಿಹಾರದ ಭರವಸೆ: ತಾಲೂಕಿನ 17 ಹಳ್ಳಿಗಳಿಗೆ ದೊಡ್ಡ ಸಮಸ್ಯೆಯಾಗಿರುವ ಬೆಣ್ಣೆಹಳ್ಳದ ಹೂಳೆತ್ತುವ ಮತ್ತು ತಡೆಗೋಡೆ ನಿರ್ಮಿಸುವ ಕುರಿತು ವಿಧಾನಸಭೆಯಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಪ್ರತಿ ವರ್ಷ 2100 ಹೆಕ್ಟೇರ್‌ ಪ್ರದೇಶ ಪ್ರವಾಹದಿಂದ ಮುಳುಗಡೆಯಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೂ ಈ ಬಗ್ಗೆ ಸ್ಪಂದಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ₹81 ಕೋಟಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ರತ್ನ ಭಾರತ ಸಮಾಜ ನವದೆಹಲಿ ಸಂಘಟನೆ ಪದಾಧಿಕಾರಿಗಳು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ನೀಡಿದರು. ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ತಹಸೀಲ್ದಾರ್‌ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ ಜುಟ್ಟಲ್, ಯರಗುಪ್ಪಿ ಗ್ರಾಪಂ ಅಧ್ಯಕ್ಷ, ಭೀಮಪ್ಪ ಮಾಯಣ್ಣವರ, ಸದಸ್ಯ ಶ್ರೀಕಾಂತ ಯಕ್ಕಣ್ಣವರ, ರವಿ ಕುಂಬಾರ, ಸಲೀಂ ಕ್ಯಾಲಕೊಂಡ, ಹನುಮಂತಪ್ಪ ವಡ್ಡರ, ನಾರಾಯಣ ಸುಕಂದ, ದೇವೇಂದ್ರಪ್ಪ ಶಂಬವನಮಠ, ಮಾಬುಸಾಬ ಭದ್ರಾಪೂರ, ಹನುಮಂತಗೌಡ ಪಾಟೀಲ, ಸಲೀಂ ಕಡ್ಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.