ಬಿಜೆಪಿ ಅಭ್ಯರ್ಥಿ ಸೋಲಿಸಲು ಸಾಧ್ಯವಿಲ್ಲ|ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಹರಿಹಾಯ್ದ ಸಚಿವ ಎಸ್‌.ಟಿ.ಸೋಮಶೇಖರ್‌| 

ಬೆಂಗಳೂರು(ನ.01): ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಗುರಿಯಾಗಿದ್ದು, ಗೆಲ್ಲಬೇಕು ಎಂಬ ಒಂದು ಅಂಶವೂ ಅವರಲ್ಲಿ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಟೀಕಾಪ್ರಹಾರ ನಡೆಸಿದ್ದಾರೆ.

‘ಕನ್ನಡಪ್ರಭ’ ಸಹೋದರ ಸಂಸ್ಥೆ ಸುವರ್ಣನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್‌ ಅವರಿಗೆ ಮೊದಲ ಚುನಾವಣೆಯಾಗಿದೆ. ಆರ್‌.ಆರ್‌.ನಗರ ಕ್ಷೇತ್ರವು ಸಂಸದ ಡಿ.ಕೆ.ಸುರೇಶ್‌ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಮಗೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ಠೇವಣಿ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಇಬ್ಬರಿಗೂ ಗೊತ್ತಿದೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದು. ಈ ಎಲ್ಲಾ ವಿಚಾರವು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಒಳ್ಳೆಯ ಠೇವಣಿ ಬರದಿದ್ದರೆ ಏನಾಗಲಿದೆ ಎಂಬುದು ಗೊತ್ತಾಗಿರುವ ಕಾರಣ ಅದಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಆರ್‌.ಆರ್‌.ಕ್ಷೇತ್ರ ಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ: ಅಶೋಕ್‌

ಕಾಂಗ್ರೆಸ್‌ ಮುಖಂಡರು ಆರೋಪ ಮಾಡಿದಂತೆ ಮುನಿರತ್ನ ಅವರು ಆ ಮಟ್ಟಿಗೆ ಇಲ್ಲ. ಕ್ಷೇತ್ರದಲ್ಲಿ ಸುತ್ತಾಡಿದರೆ ಪ್ರಕರಣ ದಾಖಲಿಸುತ್ತಾರೆ ಎಂಬುದು ಯಾರ ಬಾಯಲ್ಲೂ ಕೇಳುವುದಿಲ್ಲ. ಈ ಹಿಂದೆ ಮುನಿರತ್ನ ಪರವಾಗಿಯೇ ಸಂಸದ ಡಿ.ಕೆ.ಸುರೇಶ್‌ ಮಾತನಾಡಿದ್ದರು. ಮುನಿರತ್ನ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಏನಾದರೂ ಮಾಡಿ ಕಾಂಗ್ರೆಸ್‌ ಗೆಲ್ಲಿಸಬೇಕು ಎಂಬ ಕಾರಣಕ್ಕಾಗಿ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸಚಿವರಾಗಲು ನಾವು ಯಾರೂ ಬಂದಿಲ್ಲ. ಕಾಂಗ್ರೆಸ್‌ನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆಯಾಗಿತ್ತು. ಪಕ್ಷವನ್ನು ಬಿಡಲು ಅಡಿಪಾಯ ಹಾಕಿದವರೇ ಮುನಿರತ್ನ ಅವರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ 500 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗ ಸಚಿವರ ಬಳಿ ಹಲವು ಬಾರಿ ಹೋರಾಟ ನಡೆಸಬೇಕಾಯಿತು. ಇದರಿಂದ ಬೇಸತ್ತು ಅವರು ಪಕ್ಷವನ್ನು ತೊರೆಯಲು ನಿರ್ಧರಿಸಿದರು. ನನಗೂ ಅನುದಾನದ ಸಿಗದ ಕಾರಣಕ್ಕಾಗಿ ಬಿಡಬೇಕಾಯಿತು. ಸಚಿವ ಬೈರತಿ ಬಸವರಾಜು ಅವರಿಗೆ ವರ್ಗಾವಣೆ ವಿಚಾರದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್‌ ಅವರೊಂದಿಗಿನ ಅಸಮಾಧಾನ ಇತ್ತು. ಹೀಗಾಗಿ ಅವರು ಪಕ್ಷ ತೊರೆದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಹರಿಹಾಯ್ದರು.