ದುಡ್ಡು ಕೊಡುತ್ತೇವೆಂದರೂ ಅಕ್ಕಿ ಕೊಡುತ್ತಿಲ್ಲ: ಕೇಂದ್ರದ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ
ಬಿಜೆಪಿಗರು ಎಲ್ಲ ಸಮಾಜದ ಮುಖಂಡರನ್ನು ಮುಗಿಸಿದ್ದಾರೆ. ಲಿಂಗಾಯತರಲ್ಲಿ ಯಡಿಯೂರಪ್ಪ ಅವರಂಥ ಧೀಮಂತ ನಾಯಕರನ್ನೇ ಮುಗಿಸಿದ್ದಾರೆ. ಒಬಿಸಿ ಹಾಗೂ ಎಸ್‌ಸಿ ಒಳ ಮೀಸಲಾತಿ ಎಂಬ ಜೇನುಗೂಡಿಗೆ ಕಲ್ಲೆಸೆದು ಅವರು ದಿಕ್ಕೆಟ್ಟಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ
ಬಾಗಲಕೋಟೆ(ಜೂ.21): ಕೇಂದ್ರ ಸರ್ಕಾರ ಬಡವರ ಅಕ್ಕಿ ವಿಷಯದಲ್ಲಿ ರಾಜಕಾರಣ ಮಾಡಬಾರದು. ನಾವೇನು ಪುಕ್ಕಟೆ ಅಕ್ಕಿ ಕೇಳ್ತಿಲ್ಲ, ದುಡ್ಡು ಕೊಡ್ತೀವಿ ಅಂದಿದ್ದೇವಿ. ಆದರೂ ಕೇಂದ್ರ ಸರ್ಕಾರ ಇದನ್ನೇ ಮುಂದುವರಿಸಿದರೆ ಜನತೆ ಮುಂದೆ ಹೋಗುತ್ತೇವೆ, ಕೇಂದ್ರ ಮಾಡಿರುವ ಕುತಂತ್ರವನ್ನು ಜನತೆ ಮುಂದೆ ಇಡುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ.
ಅವರು ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದವರು ಮೊದಲು ಅಕ್ಕಿ ಕೊಡುತ್ತೇವೆ ಅಂದರು. ಕೆಲವೇ ದಿನಗಳಲ್ಲಿ ಮತ್ತೆ ಅಕ್ಕಿ ಕೊಡಲ್ಲ ಅಂದರು. ಕೇಂದ್ರದ ಸರ್ಕಾರ ಬಡವರ ಅಕ್ಕಿ ಸಲುವಾಗಿ ರಾಜಕಾರಣ ಮಾಡಬಾರದು. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೇಂದ್ರದ ಬಳಿ ಇದೆ. ನಮಗೆ ಬೇಕಾಗಿರುವುದು 2 ಲಕ್ಷ ಮೆಟ್ರಿಕ್ ಟನ್ ಮಾತ್ರ. ಆದರೂ ಸಹ ಬಡವರಿಗೆ ಅನುಕೂಲ ಆಗುವ ಯೋಜನೆಗೆ ದುರುದ್ದೇಶದಿಂದ ಅಕ್ಕಿ ಪೂರೈಕೆ ತಡೆಹಿಡಿಯುವುದು ತರವಲ್ಲ. ಬಡವರ ಬಾಳಿನ ಜೊತೆ ಕೇಂದ್ರ ರಾಜಕಾರಣ ಮಾಡಬಾರದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬಾಗಲಕೋಟೆ: ಬಸ್ ಕಿಟಕಿಗಳೇ ಬಾಗಿಲುಗಳಾದವು..!
ಬಿಜೆಪಿಗೆ ಅಭದ್ರತೆ ಕಾಡುತ್ತಿದೆ. ಮುಂಬರುವ ಸಂಸತ್ ಚುನಾವಣೆಯಲ್ಲೂ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಣತ ಕುಡಿಯುವ ನೀರಿನ ತೊಂದರೆ ಆಗದಂತೆ ಸರ್ಕಾರ ಸೂಕ್ತ ಕ್ರಮವಹಿಸಲಿದೆ. ಈ ಕುರಿತು ಅಗತ್ಯ ಬಿದ್ದರೆ ಮಹಾರಾಷ್ಟ್ರಕ್ಕೆ ನಿಯೋಗ ತೆರಳಿ ಕೃಷ್ಣೆಯ ನೀರು ಬಿಡುಗಡೆ ಮಾಡಲು ಕೋರಲಾಗುವುದು ಎಂದರು.
ಸಿಎಂ ಆಗಿ ಸಿದ್ದರಾಮಯ್ಯ ಐದು ವರ್ಷ ಇರಲಿದ್ದಾರೆ ಎಂಬ ಸಚಿವ ಮಹಾದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಅಭಿಮಾನದಿಂದ ಹಾಗೆ ಹೇಳಿದ್ದಾರೆ. ಈ ಕುರಿತು ಶಾಸಕಾಂಗ ಸಭೆಯ ಮೀಟಿಂಗ್‌ನಲ್ಲಿ ನಿರ್ಣಯ ಆಗುತ್ತದೆ. ಡಿಕೆಶಿ-ಸಿದ್ದು ಜಗಳವಾಡುತ್ತಾರೆ. ಇದರಿಂದ ನಮಗೆ ಅನುಕೂಲ ಆಗುತ್ತೆ ಎನ್ನುವ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ಪಾಪ ಜನರಿಂದ ತಿರಸ್ಕೃತರಾದ ಅವರಿಗೆ ದಿಕ್ಕು ತೋಚದಂತಾಗಿದೆ ಎಂದು ಸಚಿವರು ವ್ಯಂಗ್ಯವಾಡಿದರು.
ಬಿಜೆಪಿಗರು ಎಲ್ಲ ಸಮಾಜದ ಮುಖಂಡರನ್ನು ಮುಗಿಸಿದ್ದಾರೆ. ಲಿಂಗಾಯತರಲ್ಲಿ ಯಡಿಯೂರಪ್ಪ ಅವರಂಥ ಧೀಮಂತ ನಾಯಕರನ್ನೇ ಮುಗಿಸಿದ್ದಾರೆ. ಒಬಿಸಿ ಹಾಗೂ ಎಸ್‌ಸಿ ಒಳ ಮೀಸಲಾತಿ ಎಂಬ ಜೇನುಗೂಡಿಗೆ ಕಲ್ಲೆಸೆದು ಅವರು ದಿಕ್ಕೆಟ್ಟಿದ್ದಾರೆ ಎಂದು ಸಚಿವರು ಟಾಂಗ್ ಕೊಟ್ಟರು.