ಬಿಜೆಪಿ ಸತ್ಯ ಶೋಧನೆ, ಪರಾಮರ್ಶೆ ಏನಾಯ್ತು?: ಕಾರಜೋಳಗೆ ತಿಮ್ಮಾಪುರ ತಿರುಗೇಟು

ಎಂಎಲ್ಸಿ ಸಾಹೇಬರ ಬೆಂಬಲಿಗರು ಏನು ಹೇಳಿದ್ರು? ಕಾರಜೋಳ ಸಾಹೇಬ್ರ ಬೆಂಬಲಿಗರು ಏನು ಹೇಳಿದ್ರು? ಎಂಬುದನ್ನು ಮೊದಲು ಹೇಳಲಿ. ತಮ್ಮ ಪಕ್ಷದಲ್ಲಿದ್ದುದನ್ನು ಸರಿ ಮಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ: ಸಚಿವ ತಿಮ್ಮಾಪೂರ  

Minister RB Timmapur React to Former Minister Govind Karjol Statement grg

ಬಾಗಲಕೋಟೆ(ಆ.06): ರಾಜ್ಯ ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಛೀಮಾರಿ ಹಾಕಿದೆ ಎಂಬ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಆರೋಪಕ್ಕೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಬಿಜೆಪಿಯ ಸತ್ಯ ಶೋಧನೆ, ಪರಾಮರ್ಶೆ ಸಭೆಯಲ್ಲಿ ಏನಾಯ್ತು ಎಂಬುದನ್ನ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಂಎಲ್ಸಿ ಸಾಹೇಬರ ಬೆಂಬಲಿಗರು ಏನು ಹೇಳಿದ್ರು? ಕಾರಜೋಳ ಸಾಹೇಬ್ರ ಬೆಂಬಲಿಗರು ಏನು ಹೇಳಿದ್ರು? ಎಂಬುದನ್ನು ಮೊದಲು ಹೇಳಲಿ. ತಮ್ಮ ಪಕ್ಷದಲ್ಲಿದ್ದುದನ್ನು ಸರಿ ಮಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರವನ್ನು ಜನ ಕಿತ್ತೆಸೆಯಲಿದ್ದಾರೆ: ಗೋವಿಂದ ಕಾರಜೋಳ

ರಾಜ್ಯ ಸರ್ಕಾರ ಶಾಸಕರ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದಿದ್ದಾರೆ. ನಮ್ಮ ಪಕ್ಷದೊಳಗಿನ ಕೆಲಸ ನಾವು ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಹಾಗಾಗಿ ನಾವು ಚರ್ಚೆ ಮಾಡ್ತೀವಿ. ನಿಮಗೇಕೆ ಸಂಕಟ? ನಿಮ್ಮ ಹಾಗೆ ನಾವೇನು ಶಾಸಕರನ್ನು ಖರೀದಿ ಮಾಡಿ, ಅಧಿಕಾರಕ್ಕೆ ಬಂದಿದ್ದೀವಾ ಎಂದು ಕಾರಜೋಳ ಹೇಳಿಕೆಗೆ ಖಾರವಾಗಿ ಉತ್ತರಿಸಿದರು.

ನಮ್ಮ ಪಕ್ಷದ್ದು ಏನೆಂಬುದು ನಮಗೆ ಗೊತ್ತು. ನಾವು ವಿಶ್ವಾಸಾರ್ಹತೆಯಿಂದ ಇದೀವಿ. ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ಮುಕ್ತ ಚರ್ಚೆ ಮಾಡಲು ಅವಕಾಶ ಕೊಡ್ತೀವಿ. ಆದರೆ ಮೋದಿ ಸಾಹೇಬರು ಒಂದು ಪ್ರೆಸ್‌ ಮೀಟ್‌ ಸಹ ಮಾಡೋಕೆ ಇವರಿಗೆ ಬಿಟ್ಟಿಲ್ಲ. ಒಬ್ಬ ಎಂಪಿಗೂ ಮೋದಿ ಅವರನ್ನು ಕೇಳುವ ಯೋಗ್ಯತೆ ಇಲ್ಲ, ಇದನ್ನ ಮೊದಲು ಕಾರಜೋಳ ಹೇಳಲಿ ಎಂದು ತಿಮ್ಮಾಪುರ ತೀಕ್ಷ್ಣವಾಗಿ ಹೇಳಿದರು.

ಎಲ್ಲ ಪಕ್ಷದಲ್ಲಿ ಒಳ ಪ್ರಜಾಪ್ರಭುತ್ವ ಇದ್ರೆ ಅದು ಬಹಳ ಉತ್ತಮ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಗರಿ. ಅದನ್ನ ಹತ್ತಿಕ್ಕುವಂತಹ ಕೆಲಸವನ್ನು ನಾವು ಮಾಡಲ್ಲ. ನಮ್ಮ ಸಿಎಂ ಎಲ್ಲರ ಜತೆ ಚರ್ಚೆ ಮಾಡುತ್ತಾರೆ. ನಾವೆಲ್ಲರೂ ಜೊತೆಗೂಡಿಯೇ ಇದ್ದೇವೆ ಎಂದು ಸಚಿವರು ತಿಳಿಸಿದರು.

ಕ್ರಮೇಣ ನಿಭಾಯಿಸ್ತೇವೆ:

ಹಿಂದಿನ ಸರ್ಕಾರದ ಕಿಸೆಯಲ್ಲಿ . 100 ಇದ್ರೂ . 1000 ಕೆಲಸದ ಟೆಂಡರ್‌ ಕರೆದಿದ್ದರು. ಖಜಾನೆಯಲ್ಲಿ ದುಡ್ಡೇ ಇಲ್ದಿದ್ರು ಮಂಜೂರಾತಿ ಮಾಡಿದ್ರು. ಇದನ್ನ ಮಾಡಿದವ್ರು ಹಿಂದಿನ ಸರ್ಕಾರದವರು. ಅದನ್ನ ಸರಿ ಮಾಡುವಂತಹ ಕೆಲಸವನ್ನು ನಾವು ಮಾಡ್ತೀವಿ. ದಿಢೀರನೆ .100 ಇದ್ದಿದ್ದನ್ನು . 1000 ಟೆಂಡರ್‌ ಕರೆದ್ರೆ ಯಾವ ಸರ್ಕಾರ ತಕ್ಷಣ ನಿಭಾಯಿಸುತ್ತದೆ? ನಿಧಾನವಾಗಿ ಕೆಲಸ ಮಾಡುತ್ತೇವೆ ಎಂದರು.

ಕುಡಿಯಿರಿ ಎಂದು ಪ್ರಚಾರ ಮಾಡಿಲ್ಲ:

ಅಬಕಾರಿ ಸಚಿವರಿಂದಲೇ ಇಂದು ವ್ಯಸನಮುಕ್ತ ಕಾರ್ಯಕ್ರಮ ನಡೀತಿದೆಯಲ್ಲ? ಎಂಬ ಪ್ರಶ್ನೆಗೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಉತ್ತರಿಸಿ, ವ್ಯಸನಮುಕ್ತ ಆಗಬೇಕೆನ್ನುವುದೇ ನನ್ನದೂ ಆಶಯ. ನಾವು ಯಾರಿಗೂ ಕುಡಿಯಿರೆಂದು ಎಲ್ಲಿಯೂ ಪ್ರಚಾರ ಮಾಡಿಲ್ಲ. ಸಮಸ್ಯೆ ಅಂದ್ರೆ, ಬಹಳ ಕಡೆ ಲಿಕ್ಕರ್‌ ಬ್ಯಾನ್‌ ಆದ್ಮೇಲೆ ಕಳ್ಳಬಟ್ಟಿಸಾರಾಯಿಯತ್ತ ಜನ ವಾಲುತ್ತಿದ್ದಾರೆ. ಆದ್ದರಿಂದ ಕ್ವಾಲಿಟಿ ಡ್ರಿಂಕ್ಸ್‌ ಕೊಡುವಂತಹ ಕೆಲಸ ಸರ್ಕಾರ ಮಾಡ್ತಿದೆ ಎಂದರು.

ರಾಜಸ್ಥಾನ, ಗುಜರಾತ್‌ನಲ್ಲಿ ಮದ್ಯ ಬಂದ್‌ ಆಗಿದೆ ಅಂತಾರೆ. ಆದ್ರೆ ಆಗಿಲ್ಲ. ಇದೆಲ್ಲ ರಾಜಕೀಯ ಅಷ್ಟೇ. ಧಾರ್ಮಿಕ ಪ್ರವಚನಕಾರರು ಮಾನಸಿಕವಾಗಿ ಬದಲಾವಣೆ ಮಾಡುವಂತಹ ಕೆಲಸ ಬಹಳವಿದೆ. ಅದಕ್ಕೆ ಸಹಾಯ ಮಾಡುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ನಾನು ಕೂಡಾ ಅದಕ್ಕೆ ಬದ್ಧನಿದ್ದೇನೆ ಎಂದು ತಿಳಿಸಿದರು.

ಗಬ್ಬು ನಾರುತ್ತಿದೆ ಕಾಂಗ್ರೆಸ್‌ ಆಡಳಿತ ವ್ಯವಸ್ಥೆ: ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪ

ಹಾಲು-ಮೊಸರಿನ ಜಿಎಸ್‌ಟಿ ಬಗ್ಗೆ ಮೊದಲು ಹೇಳಲಿ:

ರಾಜ್ಯದಲ್ಲಿ ಕುಡುಕರು ಬೀದಿಗಿಳಿದ್ರೆ ವಿಧಾನಸೌಧದಲ್ಲಿ ಕುಳಿತುಕೊಳ್ಳಲು ಆಗಲ್ಲ ಎಂಬ ಕಾರಜೋಳ ಹೇಳಿಕೆಗೆ, ಬಿಜೆಪಿ ಸರ್ಕಾರ ಇದ್ದಾಗ ಮದ್ಯದ ಬೆಲೆ ಎಷ್ಟು ಏರಿಸಿದ್ದಾರೆ? ಎಂಬುದನ್ನು ಹೇಳಲೆ? ಕೊರೊನಾ ಕಾಲಘಟ್ಟದಲ್ಲಿ ಏಕೆ ಶೇ.17ರಷ್ಟು ಏರಿಸಿದ್ರು? ತಾವೇನು ಮಾಡಿದ್ದಾರೆ? ಎಂಬುದನ್ನು ಹೇಳಲಿ. ಆ ನಂತರ ನಮ್ಮದು ನಾವು ಹೇಳ್ತೀವಿ. ಮೊಸರು, ಹಾಲಿಗೆ ಜಿಎಸ್‌ಟಿ ಹಾಕಿದ್ದಾರಲ್ಲ! ಅದನ್ನು ಮೊದಲು ಹೇಳಲಿ. ಆಮೇಲೆ ನಮ್ಮ ಲಿಕ್ಕರ್‌ ಬೆಲೆ ಏರಿಕೆ ಬಗ್ಗೆ ಮಾತನಾಡಲಿ ಎಂದು ತಿಮ್ಮಾಪುರ ತಿರುಗೇಟು ನೀಡಿದರು.

ನಮ್ಮ ಶಾಸಕರು ನಿಮ್‌ ಜತೆ ಟಚ್‌ ಇದ್ದಾರಾ?

ರಾಹುಲ್‌ ಗಾಂಧಿ ರಾಜ್ಯ ಸಚಿವರಿಗೆ ಛೀಮಾರಿ ಹಾಕಿದ್ದಾರೆಂಬ ಕಾರಜೋಳ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ತಿಮ್ಮಾಪುರ, ನಿಮ್ಮ ಪಕ್ಷದಲ್ಲಿ ಏನು ನಡೀತಿದೆ? ಎಂಬುದನ್ನು ತಿಳಿದುಕೊಳ್ಳಿ ಕಾರಜೋಳ ಅವರೇ. ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ನಿಮಗಿಲ್ಲ. ನಮ್ಮ ಪಕ್ಷದೊಳಗಿನ ಮೀಟಿಂಗ್‌ ಬಗ್ಗೆ ಇವರಿಗೇನು ಗೊತ್ತಿದೆ ಎಂದು ಪ್ರಶ್ನಿಸಿದರು. ರಾಹುಲ್‌ ಗಾಂಧಿ ಅವರೇನು ಇವರಿಗೆ ಹೇಳಿದ್ದಾರಾ? ಪಾರ್ಲಿಮೆಂಟ್‌ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ನಮ್ಮ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಆಗಿದೆ. ನಮ್ಮ ಪಕ್ಷದವರು ಇವರ ಜೊತೆ ಯಾರಾದರೂ ಹೊಂದಾಣಿಕೆ ಇದಾರ? ಏನಾದರೂ ಟಚ್‌ ಇಟ್ಕೊಂಡಿದ್ದಾರಾ? ಎಂದು ಸಚಿವ ತಿಮ್ಮಾಪೂರ ಕಿಡಿ ಕಾರಿದರು.

Latest Videos
Follow Us:
Download App:
  • android
  • ios