ಬೆಳಗಾವಿ, (ಜುಲೈ.28):  ಕಳೆದೊಂದು ವಾರದಿಂದ ಕರ್ನಾಟಕ ಬಿಜೆಪಿಯಲ್ಲಿ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ. ಮತ್ತೊಂದೆಡೆ ಲಕ್ಷ್ಮಣ ಸವದಿ ಮುಂದಿನ ಸಿಎಂ ಎನ್ನುವ ಅಭಿಯಾನ ಶುರುವಾಗಿದೆ.

ಇನ್ನು ಇದಕ್ಕೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು,ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಯೋಗ ಇದ್ರೆ ಮುಖ್ಯಮಂತ್ರಿ ಆಗಲಿ ಬಿಡಿ ಎಂದು  ಮಾರ್ಮಿಕವಾಗಿ ಹೇಳಿದರು.

ಬೆಳಗಾವಿಯಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ,  ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯ ಮತ್ತು ರಾಜ್ಯದ ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬ ಅಭಿಯಾನ ನಡೆಸಿರುವುದು ನನಗಂತೂ ಗೊತ್ತಿಲ್ಲ. ಪಾಪ, ಸವದಿ ಹಣೆಬರಹದಲ್ಲಿ ಮುಖ್ಯಮಂತ್ರಿ ಯೋಗ ಇದ್ದರೆ ಯಾರೂ ತಪ್ಪಿಸಲು ಆಗುವುದಿಲ್ಲ. ಅವರಿಗೆ ಸಿಎಂ ಯೋಗ ಇದ್ರೆ ಆಗಲಿ ಬಿಡಿ ಎಂದು ಹೇಳಿ ನಕ್ಕರು.

ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಿಸಿದ್ದಾರೆ. ಇದರಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ದೊಡ್ಡ ಪಕ್ಷದಲ್ಲಿ ಇದೆಲ್ಲ ಸಾಮಾನ್ಯ. ಮುಂದೆ ಈ ಸಮಸ್ಯೆಗಳೆಲ್ಲ ಬಗೆಹರಿಯಲಿವೆ. ಹೈಕಮಾಂಡ್​ ನಿರ್ದೇಶನದಂತೆ ನಿಗಮ-ಮಂಡಳಿ ಅಧ್ಯಕ್ಷರನ್ನು ಸಿಎಂ ನೇಮಿಸಿದ್ದಾರೆ ಎಂದರು.

ಕುತೂಹಲ ಮೂಡಿಸಿದ ಸವದಿ ನಡೆ

ಹೌದು...2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಉಪಮುಖ್ಯಮಂತ್ರಿ ಪಟ್ಟ ಲಕ್ಷ್ಮಣ ಸವದಿಗೆ ಹುಡುಕಿಕೊಂಡು ಬಂದಿದೆ. ಅದು ಹೈಕಮಾಂಡ್ ಕೃಪಾಕಟಾಕ್ಷ. ಇದೀಗ ಸವದಿ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಕೇಂದ್ರ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದರಿಂದ ಇತ್ತ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಎಂದು ಸುದ್ದಿ ಹಬ್ಬಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸವದಿ ಮುಂದಿನ ಸಿಎಂ ಎನ್ನುವ ಅಭಿಯಾನ ಸಹ ಶುರುವಾಗಿದೆ.

ಒಟ್ಟಿನಲ್ಲಿ ಕೊರೋನಾ ಭೀತಿ ನಡುವೆ ಸದ್ದಿಲ್ಲದೇ ರಾಜ್ಯ ಬಿಜೆಪಿ ರಾಜಕೀಯ ಗರಿಗೆದರಿದೆ.