ಬೆಂಗಳೂರು(ಡಿ.11): ಈ ಹಿಂದೆ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾದಾಗ ಕಾಂಗ್ರೆಸ್‌ ನಾಯಕರು ರಾಜ್ಯಪಾಲರ ಮೂಲಕ ಕಾಯ್ದೆಗೆ ತಡೆ ತಂದು ಮಾಡಿದ ಅವಮಾನಕ್ಕೆ ಇಂದು ಸೇಡು ತೀರಿಸಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಪ್ರತಿಕ್ರಿಯಿಸಿದ್ದಾರೆ. 

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಹೊಸದಾಗಿ ನಾವು ಹೇಳಿಲ್ಲ. ಹೀಗಾಗಿ ಕಾಯ್ದೆ ಅಂಗೀಕಾರ ಮಾಡಿದ್ದೇವೆ ಎಂದರು.

'ದಿಕ್ಕು ದೆಸೆ ಇಲ್ಲದಂಗಾಗಿದೆ ಕಾಂಗ್ರೆಸ್; ಇನ್ನೊಂದೆರಡು ವರ್ಷಗಳಲ್ಲಿ ದೇಶದಿಂದಲೇ ಔಟ್.'!

ಕಾಂಗ್ರೆಸ್‌ ನಾಯಕರು ಈ ಹಿಂದೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಡೆ ಹಿಡಿದಿದ್ದು ಯಾಕೆ ಎಂದು ಪ್ರಶ್ನಿಸಿದ ಸಚಿವ ಆರ್‌. ಅಶೋಕ್‌, ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಮಾಡಿದ್ದ ಅಪಮಾನದ ಸೇಡನ್ನು ನಾವು ಈಗ ತೀರಿಸಿದ್ದೇವೆ. ಪರಿಷತ್‌ನಲ್ಲಿ ಕೂಡ ಗೋಹತ್ಯೆ ಮಸೂದೆಯನ್ನು ನಾವು ಪಾಸ್‌ ಮಾಡಿಸುತ್ತೇವೆ ಎಂದರು.