ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮರಾಜ್ಯ ಪರಿಕಲ್ಪನೆ ಸಾಕಾರ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಂದಾಯ ಸಚಿವ ಅಶೋಕ್‌ ಅಭಿಮತ, ಅಭಿವೃದ್ಧಿಯಲ್ಲಿ ಕ್ರಾಂತಿ ಮಾಡಿರುವ ಬಿಜೆಪಿ. 

ಹೊಸಕೋಟೆ(ಮಾ.13): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡಂತಹ ರಾಮರಾಜ್ಯದ ಕನಸು ನನಸಾಗಬೇಕಾದರೆ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅ​ಧಿಕಾರಕ್ಕೆ ಬರಲೇಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ರಾಜ್ಯದಲ್ಲಿ ಕೈಗೊಂಡಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬೆಂಗಳೂರು ನಗರದಿಂದ ಹೊಸಕೋಟೆಗೆ ಪ್ರವೇಶಿಸಿದ ವೇಳೆ ನಗರದಲ್ಲಿ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ದಶಕಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್‌ ಅಭಿವೃದ್ಧಿ ಮರೆತಿದ್ದಲ್ಲದೆ, ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿತ್ತು. 2018ರಲ್ಲೂ ಸಹ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಬಾರದ ವೇಳೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮಾಡಿತ್ತು. ಆಗಲೂ ಏನೂ ಅಭಿವೃದ್ಧಿ ಮಾಡಲಾಗದೆ, ಬಿಜೆಪಿ ಅಧಿ​ಕಾರಕ್ಕೆ ಬರುವಂತಾಯಿತು. ಬಿಜೆಪಿ ಅಧಿ​ಕಾರಕ್ಕೆ ಬಂದ ನಂತರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದ್ದರಿಂದ ಅಭಿವೃದ್ಧಿ ಜೊತೆಜೊತೆಗೆ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮತ್ತೊಮ್ಮೆ ಬಿಜೆಪಿ ಅಧಿ​ಕಾರಕ್ಕೆ ಬರಬೇಕು. ಆದ್ದರಿಂದ ಹೊಸಕೋಟೆಯಿಂದ ಎಂಟಿಬಿ ನಾಗರಾಜ್‌ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುವ ಕೆಲಸ ಆಗಬೇಕು. ಹೊಸಕೋಟೆಯಲ್ಲಿನ ಬಿಹಾರಿ ಆಡಳಿತವನ್ನು ಕೊನೆಗಾಣಿಸಬೇಕು ಎಂದು ಹೇಳಿದರು.

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಬಿಜೆಪಿ ಪಕ್ಷ ರಾಜ್ಯದ ನಾಲ್ಕು ಮೂಲೆಗಳಿಂದ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬಲ್‌ ಎಂಜಿನ್‌ ಸರ್ಕಾರವಾಗಿ ಸಾಕಷ್ಟುಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಮುಖವಾಗಿ ರೈತ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ ರೈತ ವಿದ್ಯಾನಿಧಿ​ ಯೋಜನೆ ಜಾರಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು. ಇದರಿಂದ ಸಣ್ಣಪುಟ್ಟಕೆಲಸ ಮಾಡುವಂತಹ ಬಡ ಮಧ್ಯಮ ವರ್ಗದ ಸುಮಾರು 12 ಲಕ್ಷ ಮಕ್ಕಳಿಗೆ ಇದರ ಸದುಪಯೋಗ ಆಗಿದೆ. ಆದ್ದರಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅ​ಧಿಕಾರ ರಚನೆ ಮಾಡುವುದು ಖಚಿತ ಎಂದು ಹೇಳಿದರು.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಬಿಜೆಪಿ ಸರ್ಕಾರ ಸರ್ವಧರ್ಮದ ಅಭಿವೃದ್ಧಿ ಪಕ್ಷವಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆ ಇದೆ. ದೇಶದ ಭದ್ರತೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿಯುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾ​ಧಿಸಿ, ಮತ್ತೊಮ್ಮೆ ಅಧಿ​ಕಾರ ಧಕ್ಕಿಸಿಕೊಂಡು ದೇಶದಲ್ಲೇ ಕರ್ನಾಟಕ ರಾಜ್ಯವನ್ನು ಮಾದರಿಯಾಗಿ ರೂಪಿಸಬೇಕು. ಮಾದರಿ ತಾಲೂಕು, ಜಿಲ್ಲೆಗಳನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌ ಸೇರಿದಂತೆ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಸರಿ ಕಲರವ

ಹೊಸಕೋಟೆ ಟೋಲ್‌ ಬಳಿಗೆ ಆಗಮಿಸಿದ ವಿಜಯ ಸಂಕಲ್ಪ ರಥವನ್ನು ಸಚಿವ ಎಂಟಿಬಿ ನಾಗರಾಜ್‌, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ ಬೈಕ್‌ ರಾರ‍ಯಲಿ ಮೂಲಕ ನಗರದ ಅವಿಮುಕ್ತೇಶ್ವರ ದೇವಾಲಯವರೆಗೆ ಕರೆತಂದರು. ಬಳಿಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರ ಜೊತೆ ರಥಯಾತ್ರೆ ಪೂರ್ಣಕುಂಭದ ಜೊತೆ ತಾಲೂಕು ಕಚೇರಿ ವೃತ್ತ, ಜೆಸಿ ವೃತ್ತ, ಕೆಇಬಿ ವೃತ್ತದವರೆಗೆ ಯಾತ್ರೆ ತೆರಳಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಬೃಹತ್‌ ಬಾವುಟಗಳನ್ನು ಕೈಯಲ್ಲಿ ಹಿಡಿದು ಪಕ್ಷದ ಅಭಿಮಾನ ಮೆರೆದರು.

ಹೊಸಕೋಟೆ ಮೆಟ್ರೋಗೆ 2400 ಕೋಟಿ ಮಂಜೂರು

ವೈಟ್‌ ಫೀಲ್ಡ್‌ನಿಂದ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ ಮಾಡುವಂತೆ ಕೇಂದ್ರ ಸಚಿವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಿದ್ದೆ. ಮುಖ್ಯಮಂತ್ರಿಗಳ ಬಳಿಯೂ ಸಾಕಷ್ಟುಬಾರಿ ಚರ್ಚೆ ಮಾಡಿದ್ದೆ. ಅದರ ಪರಿಣಾಮ ರಾಜ್ಯ ಸರ್ಕಾರ ವೈಟ್‌ ಫೀಲ್ಡ್‌ನಿಂದ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು 2400 ಕೋಟಿ ಯೋಜನಾ ಕಾರ್ಯ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅಷ್ಟೇ ಅಲ್ಲದೆ ಕಾವೇರಿ 5ನೇ ಹಂತದ ನೀರನ್ನು ಹೊಸಕೋಟೆಗೆ ಕೊಡಲು ಸುಮಾರು 60 ಕೋಟಿ ಅನುದಾನ ಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ನಗರದ ಜನತೆಗೆ ಮೆಟ್ರೋ ಸೌಲಭ್ಯ ಕಲ್ಪಿಸಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ಮಂಡ್ಯ ಕೇಸರಿಮಯ: ರೋಡ್‌ ಶೋದಲ್ಲಿ ನಮೋಗೆ ಹೂವಿನ ಮಳೆ

ಹೊಸಕೋಟೆಗೆ ಉಪನಗರದ ಭಾಗ್ಯ

ಬೆಂಗಳೂರು ಮಹಾ ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರವನ್ನು ಬೆಂಗಳೂರಿಗೆ ಪರ್ಯಾಯವಾಗಿ ಉಪಗ್ರಹ ನಗರದ ಭಾಗ್ಯ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಗಲಿದೆ. ಅಭಿವೃದ್ಧಿ ಆಗಬೇಕಾದರೆ ಕ್ಷೇತ್ರದಲ್ಲಿ ಎಂಟಿಬಿ ಗೆಲ್ಲಬೇಕು. ಎಂಟಿಬಿ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಇಡೀ ಬಿಜೆಪಿ ಪಕ್ಷ ಎಂಟಿಬಿ ಅವರ ಬೆನ್ನಿಗೆ ನಿಂತಿದೆ. ಈಗಾಗಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂಬ ವರದಿಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದೇನೆ. ಈ ವಿಶ್ವಾಸವನ್ನು ಹುಸಿ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಡಾ.ಕೆ.ಸುಧಾಕರ್‌ ತಿಳಿಸಿದರು.

ಮೋದಿ ಇರೋವರೆಗೆ ಕಾಂಗ್ರೆಸ್‌ ಬಾಲ ಬಿಚ್ಚಂಗಿಲ್ಲ

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿ​ಕಾರದಲ್ಲಿರುವ ಬಿಜೆಪಿ ಸರ್ಕಾರ ಡಬಲ್‌ ಎಂಜಿನ್‌ ಆಗಿ ಅಭವೃದ್ಧಿ ಮಾಡುತ್ತಿದ್ದು, ಕಾಂಗ್ರೆಸ್‌ ಅಧಿ​ಕಾರಕ್ಕೆ ಬರುವುದು ಕನಸಿನ ಮಾತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇರುವವರೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಾಲ ಬಿಚ್ಚೊಂಗಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.