ಐಟಿ ಪಾರ್ಕ್ ವಿಚಾರವಾಗಿ ಸಮಸ್ಯೆಯಿದ್ದರೆ ಆ ಕುರಿತು ಸ್ಥಳೀಯ ಉದ್ಯಮಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಟೆಂಡರ್ ಮಾರ್ಗಸೂಚಿ ಬದಲಾವಣೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುವರ್ಣ ವಿಧಾನಸಭೆ (ಡಿ.15): ಮಂಗಳೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಐಟಿ ಪಾರ್ಕ್ ವಾಣಿಜ್ಯ ಕಚೇರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಐಟಿ ಪಾರ್ಕ್ ವಿಚಾರವಾಗಿ ಸಮಸ್ಯೆಯಿದ್ದರೆ ಆ ಕುರಿತು ಸ್ಥಳೀಯ ಉದ್ಯಮಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಟೆಂಡರ್ ಮಾರ್ಗಸೂಚಿ ಬದಲಾವಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಮಂಗಳೂರು, ಉಡುಪಿ ಹಾಗೂ ಮಣಿಪಾಲ ನಗರಗಳನ್ನು ಕೇಂದ್ರವಾಗಿಸಿಕೊಂಡು ಐಟಿ-ಬಿಟಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಸರ್ಕಾರ ಮುಂದಡಿ ಇಟ್ಟಿದೆ. ಆ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಐಟಿ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರ, ಕ್ರೆಡಾಯ್ ಸೇರಿ ಇನ್ನಿತರ ಭಾಗೀದಾರರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಅದರ ಅನುಸಾರ ಟೆಕ್ ಪಾರ್ಕ್‌ನ ವಾಣಿಜ್ಯ ಕಚೇರಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಅಲ್ಲದೆ, ಐಟಿ ಪಾರ್ಕ್‌ನಲ್ಲಿ 30 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಆ ಅವಧಿ ವಿಸ್ತರಣೆಗೂ ಅವಕಾಶವಿದೆ. ಇನ್ನು, ಐಟಿ ಪಾರ್ಕ್‌ಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಚರ್ಚಿಸಿ ನಿವಾರಿಸಲಾಗುವುದು ಎಂದರು.
ಸ್ಪೀಕರ್-ಯಶ್ಪಾಲ್ ಮಾತಿನ ಚಕಮಕಿ
ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಪರ್ಯಾಯೋತ್ಸವ ಅನುದಾನ ಕೋರಿ ಮಾತನಾಡಿದ ಸಂದರ್ಭ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಡುವೆ ನಡೆದ ಮಾತಿನ ಚಕಮಕಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕರಾವಳಿಯಲ್ಲಿ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.ಶಾಸಕ ಯಶಪಾಲ್ ಸುವರ್ಣ ಅವರು ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ನೀಡುವಂತೆ ಅಧಿವೇಶನದಲ್ಲಿ ಮಾತನಾಡುತಿದ್ದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ನಿಮ್ಮ ಹರಿಕಥೆ ನಿಲ್ಲಿಸಿ ನೇರ ವಿಷಯಕ್ಕೆ ಬನ್ನಿ, ಟಿವಿಯಲ್ಲಿ ಕಾಣಿಸಿಕೊಳ್ಳಲು ಮಾತನಾಡಬೇಡಿ ಎಂದು ಹೇಳಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಯಶಪಾಲ್ ಸುವರ್ಣ, ಶಾಸಕನಾಗಿ ನನಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕಿದೆ. 15 ದಿನಗಳ ಮುಂಚಿತವಾಗಿ ನಾನು ಸಲ್ಲಿಸಿದ್ದ ಪ್ರಶ್ನೆಯಿದು. ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿರುವುದನ್ನು ಸ್ವೀಕರ್ ಆಗಿ ಅವರು ಟೀಕಿಸಿರುವುದು ಸರಿಯಲ್ಲ. ಅವರು ಪರ್ಯಾಯೋತ್ಸವದ ಬಗ್ಗೆ ವಿವರಗಳನ್ನು ನೀಡುವಾಗ ಅದನ್ನು ಹರಿಕಥೆ ಎಂದು ಹೇಳಿದ್ದು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ಅವರು ತಂದೆಯ ಹೆಸರಲ್ಲಿ ಮತ ಕೇಳಿ ಶಾಸಕರಾದವರು.
ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಇಲ್ಲಿನ ಅಭಿವೃದ್ಧಿ ಹಾಗೂ ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿರುವುದು ಸರಿಯಲ್ಲ, ಅವರ ಈ ನಡೆಯಿಂದ ನಮ್ಮ ಕಾರ್ಯಕರ್ತರು ನೊಂದಿದ್ದಾರೆ. ಶನಿವಾರ ಪುತ್ತಿಗೆ ಶ್ರೀಗಳ ಕಾರ್ಯಕ್ರಮಕ್ಕೆ ಖಾದರ್ ಅವರು ಬರಬೇಕಿತ್ತು, ಆಗ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಹಾಗೂ ಧಿಕ್ಕಾರಕ್ಕೆ ಸಿದ್ಧರಾಗಿದ್ದರು, ಈ ಕಾರಣದಿಂದಲೇ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಯಶ್‌ಪಾಲ್ ಹೇಳಿದ್ದಾರೆ.


