ನರೇಗಾ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಹಸಿ ಸುಳ್ಳು: ಸಚಿವ ಪ್ರಿಯಾಂಕ್ ಖರ್ಗೆ
ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 100 ಮಾನವ ದಿನಗಳ ಕೆಲಸದ ಅವಕಾಶವನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರಕ್ಕೆ 3 ಬಾರಿ ಪತ್ರದ ಮೂಲಕ ಹಾಗೂ ಎರಡು ಬಾರಿ ಖುದ್ದು ಭೇಟಿ ನೀಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ.
ವಿಧಾನ ಪರಿಷತ್ (ಡಿ.15): ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 100 ಮಾನವ ದಿನಗಳ ಕೆಲಸದ ಅವಕಾಶವನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರಕ್ಕೆ 3 ಬಾರಿ ಪತ್ರದ ಮೂಲಕ ಹಾಗೂ ಎರಡು ಬಾರಿ ಖುದ್ದು ಭೇಟಿ ನೀಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹೀಗಿದ್ದರೂ ಲೋಕಸಭೆಯಲ್ಲಿ ಕೇಂದ್ರ ಗ್ರಾಮೀಣ ಸಚಿವ ಗಿರಿರಾಜ್ ಸಿಂಗ್ ರಾಜ್ಯದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂಬುದಾಗಿ ಹಸಿ ಸುಳ್ಳು ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ರಾಜ್ಯದ ಪ್ರತಿಪಕ್ಷದ ಶಾಸಕರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕೆ ಮಾಡಬೇಡಿ ಎನ್ನುತ್ತಾರೆ. ಆದರೆ, 3 ಬಾರಿ ಕೇಂದ್ರಕ್ಕೆ ಅಧಿಕೃತ ಪತ್ರ ವ್ಯವಹಾರ ಮಾಡಿ 100 ದಿನಗಳನ್ನು 150ಕ್ಕೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಸ್ತಾವನೆ ಬಂದಿಲ್ಲ ಎನ್ನುತ್ತಾರೆ ಎಂದರೆ ಏನು ಹೇಳಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಎನ್‌ಡಿಆರ್ಎಫ್ ನಿಯಮಾವಳಿ ಅಡಿ ಕೇಂದ್ರ ಸರ್ಕಾರಕ್ಕೆ ಮಾತ್ರ ವೇ ಈ ಅವಕಾಶವಿದೆ.
ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಸಿಎಂ ಮಾಡ್ತಾರಾ?: ಶಾಸಕ ಯತ್ನಾಳ
ಪ್ರತಿಪಕ್ಷಗಳು ಕೇಂದ್ರಕ್ಕೆ ಬುದ್ಧಿವಾದ ಹೇಳಲಿ ಎಂದು ಸಲಹೆ ನೀಡಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಎನ್‌ಡಿಆರ್‌ಎಫ್ ನಿಯಮಗಳ ಅಡಿ ನೀವೇ 30 ರಿಂದ 90 ದಿನ ವಿಸ್ತರಿಸಲು ಅವಕಾಶವಿದೆ. ಆ ಕೆಲಸ ಮಾಡಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ, ನೀವು ನಿಯಮಗಳನ್ನು ಓದಿಕೊಂಡಿಲ್ಲ. ಅದು ಜೀವನಾಧಾರ ಕಳೆದುಕೊಂ ಡವರಿಗೆ ಕೆಲಸ ಮಾಡದಿದ್ದರೂ ಕಾಯಂ ವೇತನ ರೂಪದಲ್ಲಿ ನೀಡುವ ಪರಿಹಾರ. ಅದಕ್ಕೂನರೇಗಾಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರೀಕ್ಷಾ ಕೆಲಸಕ್ಕೆ ಪಂಚಾಯತಿ ಸಿಬ್ಬಂದಿ ನಿಯೋಜನೆ ಇಲ್ಲ: ಕರ್ನಾಟಕ ರಾಜ್ಯ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮುಂದೆ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಪರೀಕ್ಷಾ ಪ್ರಕ್ರಿಯೆಗೆ ನಿಯೋಜಿಸುವ ಪ್ರಸ್ತಾಪ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಜೆಡಿಎಸ್‌ನ ಹಿರಿಯ ಸದಸ್ಯರಾದ ಎಸ್.ಎಲ್.ಭೋಜೇಗೌಡ ಮತ್ತು ಮರಿತಿಬ್ಬೇಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಅವರ ಪರವಾಗಿ ಸಚಿವರು ಉತ್ತರಿಸಿದರು.
ಹಾಗೆಯೇ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರುಗಳ ಕಾರ್ಯವನ್ನು ಜಿಪಂ ಸಿಇಒ ಮೇಲುಸ್ತುವಾರಿಗೆ ಒಳಪಡಿಸುವ ಯಾವುದೇ ಪ್ರಸ್ತಾವನೆ ಇಲಾಖೆ ಮುಂದಿಲ್ಲ. ಈ ಕುರಿತು ಯಾವುದೇ ಮಾಹಿತಿಯೂ ನನಗಿಲ್ಲ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಜೊತೆಗೆ ಸಾಕಷ್ಟು ಕೆಲಸವೂ ಇದ್ದು ಸಿಬ್ಬಂದಿಯನ್ನು ಬೇರೆ ಇಲಾಖೆ ಕೆಲಸಕ್ಕೆ ಕಳುಹಿಸಲು ಸಾಧ್ಯವಿಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದರು.
ತಿಂಗಳಾಂತ್ಯಕ್ಕೆ ರೈತರಿಗೆ ಬೆಳೆ ವಿಮೆ ಪಾವತಿ: ಸಚಿವ ಚಲುವರಾಯಸ್ವಾಮಿ ಭರವಸೆ
ಸಚಿವರಲ್ಲಿ ಗೊಂದಲ!: ಆದರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಲಿಖಿತವಾಗಿ ನೀಡಿದ ಉತ್ತರದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿನ (ಪದವಿಪೂರ್ವ ) ಜಿಲ್ಲಾಮಟ್ಟದಲ್ಲಿನ ಕಚೇರಿಯ ದೈನಂದಿನ ಕಾರ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮೇಲುಸ್ತುವಾರಿ ಮಾಡುವ ಅವಶ್ಯಕತೆ ಇದೆ. ಆದ್ದರಿಂದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಾರ್ಯವನ್ನು ಸಂಬಂಧಪಟ್ಟ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(ಜಿಪಂ ಸಿಇಒ), ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಮೇಲುಸ್ತುವಾರಿಗೆ ಒಳಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ಸಚಿವರ ನಡುವೆ ಮಾಹಿತಿ ಕೊರತೆ ಇರುವುದು ಸ್ಪಷ್ಟವಾಗಿದ್ದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.