ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ತೀಟೆ ಮಾಡಬೇಡಿ: ಸಚಿವ ಚಲುವರಾಯಸ್ವಾಮಿ
ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ತೀಟೆ ಮಾಡುವುದು ಬೇಡ. ಹೆದ್ದಾರಿ ಬಂದ್ ಮಾಡುವುದರ ಹಿಂದೆ ರಾಜಕೀಯವಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.
ಮಂಡ್ಯ (ಆ.20): ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ತೀಟೆ ಮಾಡುವುದು ಬೇಡ. ಹೆದ್ದಾರಿ ಬಂದ್ ಮಾಡುವುದರ ಹಿಂದೆ ರಾಜಕೀಯವಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು. ಮಳೆ ವೈಫಲ್ಯದಿಂದ ನಮ್ಮಲ್ಲಿ ನೀರಿಗೆ ಸಂಕಷ್ಟ ಪರಿಸ್ಥಿತಿ ಇದೆ. ನೀರು ಬಿಟ್ಟರೆ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಕೇಂದ್ರಸರ್ಕಾರ, ನೀರು ನಿರ್ವಹಣಾ ಪ್ರಾಧಿಕಾರದ ಎದುರು ಸಮರ್ಥವಾಗಿ ವಾದ ಮಂಡಿಸಿದ್ದೇವೆ. ಇಲ್ಲಿನ ಪರಿಸ್ಥಿತಿಯನ್ನು ಅರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 10 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿತ್ತು.
ಇದನ್ನು ಒಪ್ಪದ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಚ್ಗೆ ಹೋಗಿದೆ. ಆನಂತರ ಪ್ರಾಧಿಕಾರ 15 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸೂಚಿಸಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಈಗ ರಾಜ್ಯದಲ್ಲಿ ಸಂಸದೆ ಸುಮಲತಾ ಅವರೂ ಸೇರಿದಂತೆ ಬಿಜೆಪಿಯ 26 ಮಂದಿ ಸಂಸದರಿದ್ದಾರೆ. ಅವರೇ ನೀರಿನ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಅಣೆಕಟ್ಟೆಯಲ್ಲಿರುವ ನೀರೆಲ್ಲವನ್ನೂ ನಮ್ಮ ರೈತರೇ ಬಳಸಿಕೊಳ್ಳುವಂತೆ ಮಾಡಲಿ. ಹೆದ್ದಾರಿ ಬಂದ್ ಹೆಸರಿನಲ್ಲಿ ರಾಜಕೀಯ ತೀಟೆ ಮಾಡುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀರಿಗೆ ಸಂಕಷ್ಟಎದುರಾಗಿದ್ದಾಗ ಅಣೆಕಟ್ಟೆಯ ಕೀಲಿ ಕೇಂದ್ರದ ಬಳಿ ಇದೆ, ನನ್ನ ಬಳಿ ಇಲ್ಲ ಎಂದಿದ್ದರು. ಆದರೆ, ನಾವು ಹಾಗೆ ಮಾತನಾಡದೆ ರೈತರ ಪರವಾದ ನಿರ್ಧಾರಗಳನ್ನು ಕೈಗೊಂಡು ಮುಂದುವರೆದಿದ್ದೇವೆ. ಬಿಜೆಪಿಯವರು ರಾಜಕಾರಣ ಮಾಡದೆ ರೈತರ ಸಮಸ್ಯೆಗೆ ಸಂಕಷ್ಟಸೂತ್ರವನ್ನು ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಬಿಜೆಪಿಯವರಿಗೆ ಸಲಹೆ ನೀಡಿದರು.
ನಮ್ಮೊಂದಿಗೆ 138 ಶಾಸಕರು: ಕಾಂಗ್ರೆಸ್ ಆಡಳಿತ ನಡೆಸುವುದಕ್ಕೆ ಶಾಸಕರ ಅವಶ್ಯಕತೆ ಇಲ್ಲ. ಬಿಜೆಪಿ ಮತ್ತು ಜೆಡಿಎಸ್ನಿಂದ ಹಲವು ಶಾಸಕರು ಸ್ವಯಂಪ್ರೇರಿತವಾಗಿ ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. ಈಗ ನಮ್ಮೊಂದಿಗೆ ಗೌರಿಬಿದನೂರು, ಹರಪನಹಳ್ಳಿ ಶಾಸಕರೂ ಸೇರಿದಂತೆ 138 ಜನ ಶಾಸಕರಿದ್ದಾರೆ ಎಂದು ಹೇಳಿದರು. ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಕೇಳಿದಾಗ, ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಯಾರಾರಯರು ಬಂದು ಸೇರುವರೆಂಬುದು ಮುಂದಿನ ದಿನಗಳಲ್ಲಿ ನಿಮಗೇ ತಿಳಿಯಲಿದೆ. ಯಾರನ್ನೂ ರಹಸ್ಯವಾಗಿ ಸೇರಿಸಿಕೊಳ್ಳುವುದಿಲ್ಲ. ಎಲ್ಲರಿಗೂ ತಿಳಿಯುವಂತೆ ಸೇರಿಸಿಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಬಗ್ಗೆ ಸಂಸದೆ ಸುಮಲತಾ ಮೃದುಧೋರಣೆ ತಳೆದಿರುವ ಬಗ್ಗೆ ಕೇಳಿದಾಗ, ಅವರು ಜಿಲ್ಲೆಯ ಸಂಸದರು. ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ರಾಜಕೀಯವಾಗಿ ಏನೇನೋ ಅವರ ಬಗ್ಗೆ ಮಾತನಾಡಲಾಗದು. ನಾವು ಮತ್ತು ಅವರು ರಾಜಕೀಯ ವಿಚಾರವಾಗಿ ಏನನ್ನೂ ಚರ್ಚಿಸಿಲ್ಲ. ಅವರು ನೀರಿನ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಸಂಸದರಾಗಿ ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಮುಂದಿನ ವಿಚಾರಗಳನ್ನು ಆನಂತರ ಮಾತನಾಡೋಣ ಎಂದಷ್ಟೇ ಹೇಳಿದರು. ಶಾಸಕ ಪಿ.ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರಿದ್ದರು.
ಎಚ್ಡಿಕೆ ಸತ್ಯಹರಿಶ್ಚಂದ್ರರಲ್ಲವೇ?: ಕಾಂಗ್ರೆಸ್ನವರನ್ನು ನೋಡಿ ಮಳೆ ಬರುತ್ತಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅವರು ಮಹಾ ಸತ್ಯಹರಿಶ್ಚಂದ್ರರರು. ನಮ್ಮನ್ನು ನೋಡಿ ಮಳೆ ಬರುವುದು ಬೇಡ. ಅವರೂ ಕರ್ನಾಟಕದಲ್ಲಿದ್ದಾರಲ್ಲವೇ. ಅವರನ್ನೇ ನೋಡಿ ಮಳೆ ಬರಲಿ. ರೈತರ ಹಿತ ಕಾಪಾಡಲು ಮಳೆಗಾಗಿ ಅವರೇ ಪೂಜೆ ಮಾಡಿಸಲಿ. ನಾವೆಲ್ಲರೂ ಸೇರಿ ಅವರಿಗೇ ಥ್ಯಾಂಕ್ಸ್ ಹೇಳೋಣ. ಪ್ರಕೃತಿಯ ನಿಯಮವನ್ನು ಇನ್ನೊಬ್ಬರಿಗೆ ಹೋಲಿಸುವುದು ಅವಿವೇಕತನ. ಅಧಿಕಾರದಲ್ಲಿರುವವರನ್ನು ನೋಡಿ ಎಲ್ಲಾದರೂ ಮಳೆ ಬರುತ್ತದೆಯೇ. ಎಸ್.ಎಂ.ಕೃಷ್ಣ, ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಇದ್ದಾಗಲೂ ಬರ ಬಂದಿರಲಿಲ್ಲವೇ. ಹಾಗಂತ ಎಲ್ಲರನ್ನೂ ದೂಷಿಸಲಾಗುವುದೇ ಎಂದು ಪ್ರಶ್ನಿಸಿದರು.
ಸಚಿವ ಎಂ.ಸಿ.ಸುಧಾಕರ್ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ
ಸುಮಲತಾ ಮಾತುಗಳಲ್ಲ: ಕಾವೇರಿ ನೀರಿನ ವಿಚಾರದಲ್ಲಿ ತಾವು ಹೇಳಬೇಕಾದ ಮಾತುಗಳೆಲ್ಲವನ್ನೂ ಸುಮಲತಾ ಮೂಲಕ ಹೇಳಿಸುತ್ತಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯವಾಗಿ ತೀಟೆ ಮಾಡುತ್ತಿದ್ದಾರೆ. ನೀರು ಬಿಡುಗಡೆಗೆ ಆದೇಶ ಮಾಡಿಯೇ ಇಲ್ಲವೆಂದು ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಆದೇಶ ಕಾಪಿಯನ್ನು ನಾನು ಕೊಡುತ್ತೇನೆ ಎಂದು ಸವಾಲು ಹಾಕಿದರು.