ಧರ್ಮ, ದೇವರ ವಿಷಯದಲ್ಲಿ ಬಿಜೆಪಿ ರಾಜಕೀಯ: ಸಚಿವ ಚಲುವರಾಯಸ್ವಾಮಿ
ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ ನಾಯಕರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಬಂಡವಾಳ ಇಲ್ಲ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಆಹ್ವಾನ ನೀಡಿಲ್ಲ ಎಂದರೆ ಇದು ರಾಜಕೀಯವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು (ಜ.03): ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ ನಾಯಕರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಬಂಡವಾಳ ಇಲ್ಲ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಆಹ್ವಾನ ನೀಡಿಲ್ಲ ಎಂದರೆ ಇದು ರಾಜಕೀಯವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಬಿಜೆಪಿಯವರು ರಾಜಕಾರಣ ನಡೆಸಲು ಒಂದೊಂದು ಚುನಾವಣೆಗೆ ಒಂದೊಂದು ವಿಷಯ ಮುನ್ನೆಲೆಗೆ ತರುತ್ತಿದ್ದಾರೆ. ರಾಮಮಂದಿರ ಎಲ್ಲರಿಗೂ ಸೇರಿದ್ದಾಗಿದೆ. ಶ್ರೀರಾಮನನ್ನು ಬಿಜೆಪಿಯವರು ಎಷ್ಟು ಪೂಜಿಸುತ್ತಾರೋ ಅವರಿಗಿಂತ ಹೆಚ್ಚಾಗಿ ನಾವು ಶ್ರೀರಾಮ, ಕೃಷ್ಣನ ಭಕ್ತರಾಗಿದ್ದೇವೆ. ನಾವು ದೇವರು, ಧರ್ಮ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿ ನಡೆಗೆ ಸಚಿವರ ತರಾಟೆ: ಮೂವತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ರಾಮಮಂದಿರ ಕುರಿತು ನಡೆದ ಹೋರಾಟದ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕರ ವರ್ತನೆಯನ್ನು ಸಚಿವರಾದ ಈಶ್ವರ ಖಂಡ್ರೆ, ಆರ್,ಬಿ. ತಿಮ್ಮಾಪುರ, ಚಲುವರಾಯ ಸ್ವಾಮಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ತೀವ್ರವಾಗಿ ಖಂಡಿಸಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಆದರೆ ಬಿಜೆಪಿ ಧರ್ಮ, ದೇವರುಗಳ ವಿಷಯದಲ್ಲಿ ರಾಜಕೀಯ ಮಾಡಲು ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಹಳೆಯ ಪ್ರಕರಣಗಳನ್ನು ಇತ್ಯರ್ಥ ಮಾಡುವಂತೆ ಸರ್ಕಾರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಹೊಸ ಸರ್ಕಾರ ಬಂದ ಮೇಲೆ ಪ್ರಕರಣ ದಾಖಲಿಸಿಲ್ಲ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಬಿಜೆಪಿಯವರು ಇಂತಹ ಭಾವನಾತ್ಮಕ ವಿಷಯ ಬಿಟ್ಟು ಜನರ ಸಮಸ್ಯೆ ಬಗೆ ಹರಿಸುವ ಬಗ್ಗೆ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ,ಕಾನೂನಿನ ಅಡಿಯಲ್ಲಿ ಎಲ್ಲರೂ ಬರುತ್ತಾರೆ, ಕರಸೇವಕ ರಾಮಭಕ್ತ ಅಲ್ಲಾನ ಭಕ್ತನೂ ಬರುತ್ತಾರೆ. ಬಿಜೆಪಿಯವರು ಧರ್ಮ, ದೇವರು ಬಿಟ್ಟು ಬೇರೇನೂ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ಶ್ರೀರಾಮಮಂದಿರ ರೀವೆಂಜ್ ತೀರಿಸಿಕೊಳ್ಳಲು ಹೊರಟಿದೆ: ಪ್ರಲ್ಹಾದ್ ಜೋಶಿ
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ ರಾಮ ಯಾರೊಬ್ಬರ ಜಾಗೀರ್ ಅಲ್ಲ, ರಾಮ, ಸೀತೆ ಎಲ್ಲ ಸಮುದಾಯಕ್ಕೆಎಲ್ಲ ಹಿಂದುಗಳಿಗೆ ಸೇರಿದವನು, ಬಿಜೆಪಿಯವರು ಭಾವನಾತ್ಮಕ ವಿಷಯ ಸೇರಿಸಿ ಮಾತನಾಡುತ್ತಿದ್ದಾರೆ ಎಂದರು. ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ ನಾಯಕರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಬಂಡವಾಳ ಇಲ್ಲ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಆಹ್ವಾನ ನೀಡಿಲ್ಲ ಎಂದರೆ ಇದು ರಾಜಕೀಯವಾಗಿದೆ ಎಂದರು.