ಕಾವೇರಿ ನೀರಿನ ಸಮಸ್ಯೆ ಬಗೆಹರಿಸ್ತೀನಂತ ನಾನು ಹೇಳಿದ್ನಾ: ಸಚಿವ ಚಲುವರಾಯಸ್ವಾಮಿ
ಲೋಕಸಭೆ ಚುನಾವಣೆ ಸಮಯದಲ್ಲಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ ಎಂದು ನಾನು ಹೇಳಿದ್ದನೇ. ಹೇಳಿರೋರು ಅವರು. ಈಗ ತಮಿಳುನಾಡು ನೀರು ಹರಿಸುವಂತೆ ಶಿಫಾರಸು ಮಾಡಲಾಗಿದೆ.
ಮಂಡ್ಯ (ಜು.15): ಲೋಕಸಭೆ ಚುನಾವಣೆ ಸಮಯದಲ್ಲಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ ಎಂದು ನಾನು ಹೇಳಿದ್ದನೇ. ಹೇಳಿರೋರು ಅವರು. ಈಗ ತಮಿಳುನಾಡು ನೀರು ಹರಿಸುವಂತೆ ಶಿಫಾರಸು ಮಾಡಲಾಗಿದೆ. ಸಂಸದರು, ಕೇಂದ್ರ ಸಚಿವರಾಗಿರುವವರು ಕಾವೇರಿ ಕಣಿವೆ ರೈತರ ಹಿತದೃಷ್ಟಿಯಿಂದ ಶಿಫಾರಸನ್ನು ರದ್ದುಪಡಿಸಲಿ ಎಂದು ಎಚ್.ಡಿ.ಕುಮಾರಸ್ವಾಮಿ ಹೆಸರೇಳದೆ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಪಡಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿಲ್ಲವೆಂದು ಪುಟ್ಟರಾಜು ಹೇಗೆ ಹೇಳುತ್ತಾರೆ. ಜುಲೈ ಅಂತ್ಯದವರೆಗೆ ನೀರು ಕೊಡಲು ಸಾಧ್ಯವಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೇವೆ.
ಪತ್ರಿಕೆ-ಮಾಧ್ಯಮ ಮಿತ್ರರಿಗೂ ತಿಳಿಸಿದ್ದೇವೆ. ರಾಜಕೀಯ ತೀಟೆ ಮಾಡಲು ಏನೇನೋ ಮಾತನಾಡಬಾರದು. ಮಂಡ್ಯದಿಂದ ಸಂಸದರಾಗಿ ಗೆದ್ದುಹೋದವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಪ್ರಧಾನಿ, ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಒತ್ತಾಯಿಸುತ್ತಿದ್ದೇವೆ. ನಮ್ಮಿಂದಾದ ಪ್ರಯತ್ನವನ್ನೂ ನಾವೂ ಮಾಡುತ್ತಿದ್ದೇವೆ. ಒಮ್ಮೆ ನೀರು ಬಿಡುವ ವಿಚಾರಕ್ಕೂ ನಮಗೂ ಸಂಬಂಧವಿಲ್ಲವೆಂದು ಹೇಳಿಬಿಡಲಿ ಅವರನ್ನು ನಾವೇನೂ ಕೇಳುವುದಿಲ್ಲವೆಂದು ಕುಟುಕಿದರು.
ತಾಂತ್ರಿಕ ತಜ್ಞರು, ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್‌ಗೆ ಅರ್ಜಿ: ಟ್ರಯಲ್ ಬ್ಲಾಸ್ಟ್ ಸಾಧಕ-ಬಾಧಕಗಳ ಕುರಿತಂತೆ ತಾಂತ್ರಿಕ ತಜ್ಞರು ಹಾಗೂ ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು. ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರ ಜೊತೆ ಚರ್ಚೆ ನಡೆಸಲಾಗಿದ್ದು, ಜು.೧೫ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವುದರಿಂದ ಅದನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಮಲೆನಾಡಿನಲ್ಲಿ ಮಳೆ ಬಿರುಸು: ರೀಲ್ಸ್ ಮಾಡಿದ ಹುಚ್ಚಿಗೆ ರಸ್ತೆ ಸಂಪೂರ್ಣ ಹಾಳು, ಐವರು ಪೊಲೀಸ್ ವಶಕ್ಕೆ!
ಮುಂದೆ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳು ಎದುರಾಗದಂತೆ ಅಣೆಕಟ್ಟು ಸುರಕ್ಷತಾ ಸಮಿತಿ, ಕಾನೂನು ತಜ್ಞರು, ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡುವುದೋ, ಟ್ರಯಲ್ ಬ್ಲಾಸ್ಟ್ ನಡೆಸದಂತೆ ತೀರ್ಮಾನಿಸುವುದು ಸೂಕ್ತವೋ ಎಂಬ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದರು. ಈ ಹಿಂದೆ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದ್ದ ಸಮಯದಲ್ಲಿ ರೈತ ಮುಖಂಡರಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಮಾತುಕತೆಗೆ ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದ್ದೆ. ಆದರೆ, ತುರ್ತಾಗಿ ಸಭೆ ನಡೆಸಿದ್ದರಿಂದ ಆಹ್ವಾನಿಸಲಾಗಲಿಲ್ಲ. ಹಾಗಾಗಿ ರೈತರಿಗೆ ಯಾವುದೇ ಆತಂಕ ಬೇಡ. ನಾವು ನಿಮ್ಮ ಪರವಾಗಿದ್ದೇವೆ. ಕಾನೂನಾತ್ಮಕ ಸಂಸ್ಥೆಗಳಿಂದ ಅಭಿಪ್ರಾಯ ಪಡೆದು ರೈತರ ಆಶಯದಂತೆ ನಡೆಯಲಾಗುವುದು ಎಂದರು.