ಬೊಮ್ಮಾಯಿ 1 ತಿಂಗ್ಳಲ್ಲಿ ಸಿಕ್ಸರ್ ಹೊಡೆದಿದ್ದಾರೆ, ಕಲಬುರಗಿ ಪಾಲಿಕೆ ಗೆಲುವಿಗೆ ಕಾರಣ ಬಿಚ್ಚಿಟ್ಟ ನಿರಾಣಿ

* ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
* ಅಗತ್ಯ ‌ಸಂಖ್ಯಾ ಬಲದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದ ಸಚಿವ ಮುರುಗೇಶ್ ‌ನಿರಾಣಿ
* ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಿಗೆ  ಗೆಲುವಿನ ಸಮರ್ಪಣೆ ಮಾಡಿದ ಎಲೆಕ್ಷನ್ ಉಸ್ತುವಾರಿ

Minister Murugesh Nirani Talks about Kalaburagi corporation Election Results 2021 rbj

ಬೆಂಗಳೂರು, (ಸೆ.06): ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ರಿಸಲ್ಟ್ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟಬಹುತಮ ಸಿಕ್ಕಿಲ್ಲ. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 

 ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ,ಪಕ್ಷೇತರ ಅಭ್ಯರ್ಥಿ 1  ಹಾಗೂ  ಜೆಡಿಎಸ್ 4 ಸ್ಥಾನದಲ್ಲಿ ಗೆದ್ದು ಕಿಂಗ್ ಮೇಕರ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೇರಬೇಕಾದ್ರೆ ಜೆಡಿಎಸ್‌ ಸಹಕಾರ ಅಗತ್ಯವಾಗಿದೆ.

ಕಲಬುರಗಿ ಪಾಲಿಕೆ ಎಲೆಕ್ಷನ್ ರಿಸಲ್ಟ್: ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ?

ಆದ್ರೆ, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಂಖ್ಯಾ ಬಲದೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ ಎಂದು ಎಲೆಕ್ಷನ್‌ ಉಸ್ತುವಾರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾಸಚಿವ ಮುರುಗೇಶ್ ಆರ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತದಾರರು ನಮಗೆ ಸಂಪೂರ್ಣವಾಗಿ ಬಹಮತ ನೀಡಿಲ್ಲ. ಶಾಸಕರು , ವಿಧಾನಪರಿಷತ್ ಸದಸ್ಯರು ಜೊತೆಗೆ ಪಕ್ಷೇತರರು ಕೂಡ ನಮಗೆ ಬೆಂಬಲ ‌ನೀಡಲು ಮುಂದೆ ಬಂದಿದ್ದಾರೆ. ಹೀಗಾಗಿ ಈ ಬಾರಿ ಪಾಲಿಕೆಯಲ್ಲಿ ನಾವೇ ಅಧಿಕಾರ ಹಿಡಿಯುತ್ತವೆ ಎಂದರು.

ಕಲಬುರಗಿ ಅತಂತ್ರ : 4 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಕಿಂಗ್ ಮೇಕರ್

ಈ ಚುನಾವಣೆಯನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೆನು. ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟಿದ್ದರು. ಅದೇ ರೀತಿ ನಾನು ನಮ್ಮ ಪಕ್ಷದ ಪ್ರಧಾನಕಾರ್ಯದರ್ಶಿ ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆ ಸದಸ್ಯರು, ಮುಖಂಡರು ಸೇರಿದಂತೆ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದೆವು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗಬಹುದಾದ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಮತದಾರರು ಇದನ್ನು ಒಪ್ಪಿ ನಮಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ದಿಕ್ಸೂಚಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದೆ. ಇದು ಮುಂಬರುವ ಎಲ್ಲಾ ಚುನಾವಣೆಗೂ ದಿಕ್ಸೂಚಿ. ಹಾನಗಲ್, ಸಿಂಧಗಿ ಸೇರಿದಂತೆ  ಮುಂಬರುವ ಎಲ್ಲಾ ಚುನಾವಣೆಗೂ ಇದು ದಿಕ್ಸೂಚಿಯಾಗಲಿದೆ. ಫಲಿತಾಂಶವು ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿರುವುದರಿಂದ ನಾವು ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಮತ್ತೆ ಜೆಡಿಎಸ್‌ ಜತೆ ದೋಸ್ತಿ ಮಾಡ್ತಾರಾ? ಸಿದ್ದರಾಮಯ್ಯ ಹೇಳಿದ್ದು ಹೀಗೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿದ ಒಂದೇ ತಿಂಗಳಿನಲ್ಲಿ ಸಿಕ್ಸರ್ ಹೊಡೆದಿದ್ದಾರೆ. ರಾಜ್ಯದ ಜನತೆ ಅವರ ನಾಯಕತ್ವಕ್ಕೆ ಜೈ ಎಂದಿರುವುದು ಫಲಿತಾಂಶದಿಂದ ಗೋಚರವಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಮತದಾರ ಒಪ್ಪಿದ್ದಾನೆ ಎಂದು ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ನಾಯಕರು. ಅವರು ಪ್ರಚಾರ ಮಾಡದಿದ್ದರೂ ಪಕ್ಷಕ್ಕೆ ಯಾವಾಗಲೂ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಪಕ್ಷದ ಹಿರಿಯರಾದ ದಿ.ಅಟಲ್‍ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಮುರುಗೇಶ್ ನಿರಾಣಿಯವರು ಸಲ್ಲಿಸಿದರು.

ಕಾಂಗ್ರೆಸ್ ಎಲ್ಲಾ ಹಂತದ ನಾಯಕರು ಪ್ರಚಾರ ನಡೆಸಿದ್ದರೂ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪನವರು ಪ್ರಚಾರ ಮಾಡದಿದ್ದರೂ ಎರಡನೆ ಹಂತ ನಾಯಕರು ಪ್ರಚಾರ ನಡೆಸಿದ್ದರು. ಮತದಾರರು ನಮ್ಮನ್ನೇ ಕೈ ಹಿಡಿದಿರುವುದರಿಂದ ನಮ್ಮ ಶಕ್ತಿ ಎಷ್ಟು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ತೀರ್ಮಾನಕ್ಕೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ  ಮುಂದಿನ ಚುನಾವಣೆ ನಡೆಯಲಿದೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ ಅವರು, ಪಕ್ಷದ ವರಿಷ್ಠರು ಏನೇ ತೀರ್ಮನ ತೆಗೆದುಕೊಂಡರೂ ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಾನ ಪಕ್ಷದ ಶಿಸ್ತಿನ ಶಿಫಾಯಿ ಆಗಿದ್ದು, ವರಿಷ್ಠರ ತೀರ್ಮಾನವೇ ಅಂತಿಮ ಎಂದರು.

ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಅಮಿತ್ ಶಾ ಅವರು ದಾವಣಗೆರೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ನಾಯಕತ್ವನ್ನು ಗುಣಗಾನ ಮಾಡಿದ್ದಾರೆ. ಅವರ ಜನಪರ ಕಾರ್ಯಕ್ರಮಗಳು, ಸಂಘಟನೆ, ಪಕ್ಷವನ್ನು ಬೆಳೆಸಿದ ರೀತಿಗೆ ಮುಕ್ತಕಂಟದಿಂದ ಪ್ರಶಂಸಿಸಿದ್ದಾರೆ. 

ಎಂತಹ ಸಂದರ್ಭದಲ್ಲೂ ಬಿಜೆಪಿ ಯಡಿಯೂರಪ್ಪನಂತಹ ಮೇರು ವ್ಯಕ್ತಿತ್ವದ ನಾಯಕರನ್ನು ಕಡೆಗಣನೆ ಮಾಡುವುದಿಲ್ಲ. ಇದೆಲ್ಲವೂ ಊಹಾಪೋಹ ಎಂದು ಹೇಳಿದರು.

ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಏನೇ ತೀರ್ಮಾನ ಕೈಗೊಂಡರೂ ಅದು ಪಕ್ಷದ ಹಿತದೃಷ್ಟಿಯಿಂದಲೇ ತೆಗೆದುಕೊಂಡಿರುತ್ತಾರೆ. ವರಿಷ್ಠರ ತೀರ್ಮಾನಕ್ಕೆ ಯಾರೂ ಅಪಸ್ವರ ತೆಗೆಯುವುದಿಲ್ಲ ಎಂದರು.

Latest Videos
Follow Us:
Download App:
  • android
  • ios