Asianet Suvarna News Asianet Suvarna News

ಕುಮಾರಸ್ವಾಮಿ ಬುಟ್ಟಿಯಲ್ಲಿ ಏನೂ ಇಲ್ಲ: ಮುನಿರತ್ನ

ಕುಮಾರಸ್ವಾಮಿ ಅವರ ಬಳಿ ಏನು ಇದೆಯೋ ಅದನ್ನು ಹೊರಗೆ ಬಿಡಲಿ, ನಾನೇ ಸ್ಕ್ರೀನ್‌ ಹಾಕುತ್ತೇನೆ. 70 ಎಂಎಂ ಸ್ಕ್ರೀನ್‌ ನಾನೇ ವ್ಯವಸ್ಥೆ ಮಾಡುತ್ತೇನೆ. ಶೋಲೆ ಸಿನಿಮಾ 70 ಎಂಎಂ ಸ್ಕ್ರೀನ್‌ ಬಂದ ಮೇಲೆ ಬೇರೆ ಯಾವ ಸಿನಿಮಾನೂ ಬಂದಿಲ್ಲ ಎಂದು ವ್ಯಂಗ್ಯವಾಡಿದ ಮುನಿರತ್ನ

Minister Munirathna Slams Former CM HD Kumaraswamy grg
Author
First Published Jan 8, 2023, 2:30 AM IST

ಬೆಂಗಳೂರು(ಜ.08):  ಸ್ಯಾಂಟ್ರೋ ರವಿ ಮುಖ ಸಹ ನಾನು ನೋಡಿಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾಲಿ ಬುಟ್ಟಿ ಇಟ್ಟುಕೊಂಡು ಹಾವಿದೆ ಹಾವಿದೆ ಎನ್ನುತ್ತಾರೆ. ಅದರಲ್ಲಿ ಹಾವಲ್ಲ, ಹಾವು ರಾಣಿ ಕೂಡ ಇಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ಲೇವಡಿ ಮಾಡಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಬಳಿ ಏನೇನು ಹಾವು ಇದೆವೋ ಎಲ್ಲವನ್ನೂ ಹೊರಗಡೆ ಬಿಡಲಿ. ಸ್ಯಾಂಪಲ್‌ ಇದೆ ಎನ್ನುತ್ತಾರೆ. ಅದೇನು ಸ್ವೀಟ್‌ ಅಂಗಡಿನಾ, ಸ್ಯಾಂಪಲ್‌ ನೋಡುವುದಕ್ಕೆ. ಯಾರು ಅವರು ಸ್ಯಾಂಟ್ರೋ ರವಿ. ಅವನ ಮುಖ ಸಹ ನಾನು ನೋಡಿಲ್ಲ. ಮುಂಬೈಗೆ ಹೋದವರ ಸಾಲಿನಲ್ಲಿ ನಾನಿಲ್ಲ. ನಾನು ಕುರುಕ್ಷೇತ್ರ ಚಿತ್ರಕ್ಕಾಗಿ ಚೆನ್ನೈ, ಮುಂಬೈಗೆ ಹೋಗಿದ್ದೆ. ಕುಮಾರಸ್ವಾಮಿ ಖಾಲಿ ಬುಟ್ಟಿ ತೋರಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯಾದವರು ಹೀಗೆ ಹೇಳಬಹುದಾ? ಎಂದು ಟೀಕಾಪ್ರಹಾರ ನಡೆಸಿದರು. ಕುಮಾರಸ್ವಾಮಿ ಏನಾದರೂ ಮುಂಬೈ ಸ್ನೇಹಿತರ ಅಶ್ಲೀಲ ಸಿಡಿ ಬಿಡುಗಡೆ ಮಾಡಿದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿದರು.

ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಅವರು, ನಾನಂತೂ ಮುಂಬೈಗೆ ಹೋಗಿರಲಿಲ್ಲ. ನನ್ನ ಮುಂಬೈ ಸ್ನೇಹಿತರ ಮೇಲೂ ನಂಬಿಕೆ ಇದೆ. ಕುಮಾರಸ್ವಾಮಿ ಅವರ ಬಳಿ ಏನು ಇದೆಯೋ ಅದನ್ನು ಹೊರಗೆ ಬಿಡಲಿ, ನಾನೇ ಸ್ಕ್ರೀನ್‌ ಹಾಕುತ್ತೇನೆ. 70 ಎಂಎಂ ಸ್ಕ್ರೀನ್‌ ನಾನೇ ವ್ಯವಸ್ಥೆ ಮಾಡುತ್ತೇನೆ. ಶೋಲೆ ಸಿನಿಮಾ 70 ಎಂಎಂ ಸ್ಕ್ರೀನ್‌ ಬಂದ ಮೇಲೆ ಬೇರೆ ಯಾವ ಸಿನಿಮಾನೂ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಜತೆಗಿನ ವಿಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೊಟ್ಟೆಪಾಡಿಗೆ ಕೆಲವರು ಏನೇನೋ ಮಾಡುತ್ತಾರಂತೆ. ಸೋಮಶೇಖರ್‌ ಕಚೇರಿಗೆ ನುರಾರು ಜನ ಹೋಗಿ ಕಷ್ಟಹೇಳಿಕೊಳ್ಳುತ್ತಾರೆ. ಅವನು ಸಹ ಅದೇ ರೀತಿ ಹೋಗಿರಬಹುದು. ಸೋಮಶೇಖರ್‌ ಅವರಿಗೆ ಹೇಗೆ ಗೊತ್ತಾಗಬೇಕು. ಅದನ್ನು ತಪ್ಪು ಎಂದು ಯಾವ ರೀತಿ ಹೇಳುವುದಕ್ಕೆ ಆಗಲ್ಲ. ಸೋಮಶೇಖರ್‌ ಅವರದು ಬೇರೆ ಏನಾದರೂ ಇದ್ದರೆ ಕುಮಾರಸ್ವಾಮಿ ಹೇಳಬೇಕು. ಅದನ್ನು ಬಿಟ್ಟು ಕೇವಲ ಕಚೇರಿಗೆ ಹೋಗಿ ಬಂದಿರುವುದು ತೋರಿಸಿದರೆ ಆಗುತ್ತಾ? ಎಂದು ತಿರುಗೇಟು ನೀಡಿದರು.

ಸಂಸದ ಡಿ.ಕೆ.ಸುರೇಶ್‌ ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧಿಸುವ ವಿಚಾರ ಸಂಬಂಧ ಮಾತನಾಡಿ, ಆರ್‌.ಆರ್‌.ನಗರ ಮಹಾದ್ವಾರ ದೊಡ್ಡದಾಗಿ ಮಾಡುತ್ತಿದ್ದೇವೆ. ಬರಲಿ, ಎಲ್ಲಾ ಸಿಗ್ನಲ್‌ ಫ್ರೀ ಕಾರಿಡಾರ್‌ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಹೊಟ್ಟೆಪಕ್ಷದ ರಂಗಸ್ವಾಮಿ ಸಹ 48 ಬಾರಿ ಸ್ಪರ್ಧೆ ಮಾಡಿದರು ಎಂದು ವ್ಯಂಗ್ಯದಾಟಿಯಲ್ಲಿಯೇ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios