ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸಿದ್ದರಾಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದು ಉತ್ಸವ ಆಚರಣೆ ಹಮ್ಮಿಕೊಂಡರೂ ಅಚ್ಚರಿ ಇಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ಜು.13): ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸಿದ್ದರಾಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದು ಉತ್ಸವ ಆಚರಣೆ ಹಮ್ಮಿಕೊಂಡರೂ ಅಚ್ಚರಿ ಇಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ವ್ಯಂಗ್ಯವಾಡಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮೋತ್ಸವದ ಹಿಂದೆ ಚುನಾವಣಾ ರಾಜಕಾರಣ ಇದೆ. ಅದನ್ನು ಬಿಟ್ಟರೆ ಬೇರೇನೂ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಟ್ಟಿದ ದಿನವೇ ಗೊತ್ತಿಲ್ಲ. ಸಿದ್ದರಾಮಣ್ಣ ಅವರಿಗೆ ಹುಟ್ಟಿದ ದಿನದ ಶುಭಾಶಯ ಎಂದರೆ, ಏಯ್‌ ಹೋಗಿ ನನಗೆ ಹುಟ್ಟಿದ ದಿನವೇ ಗೊತ್ತಿಲ್ಲ ಎನ್ನುತ್ತಿದ್ದರು. 

ಆದರೀಗ ಇದ್ದಕ್ಕಿದ್ದಂತೆ ಆ.3 ಅಂತ ಹೇಗೆ ತಿಳಿಯಿತೋ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು. ‘ಹುಟ್ಟುಹಬ್ಬವನ್ನು ಅವರು ಮಾಡಿಕೊಳ್ಳುತ್ತಿರುವುದಲ್ಲ, ಅವರ ಅಕ್ಕಪಕ್ಕದಲ್ಲಿರುವವರು ಮಾಡುತ್ತಿದ್ದಾರೆ. ಅವರೆಲ್ಲ ಯಾರು ಅಂತ ಎಲ್ಲರಿಗೂ ಗೊತ್ತು’ ಎಂದು ಚಾಟಿ ಬೀಸಿದರು. ‘ಸಿದ್ದರಾಮಯ್ಯ ಅವರಂತೆ ನಾನು ಬೇರೊಂದು ಪಕ್ಷ ತೊರೆದು ಬಿಜೆಪಿಗೆ ಬಂದಿರುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಇದೆಲ್ಲಾ ಸಹಜ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುತ್ತೇನೆ. ಪಕ್ಷ ಎಲ್ಲವನ್ನೂ ಕೊಟ್ಟು ಜನರ ಸೇವೆಗೆ ಅವಕಾಶ ಕಲ್ಪಿಸಿದೆ. ಬೇರೆ ಯೋಚನೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಸುತ್ತ ಹುಲಿ, ಹಾವು, ನಾಯಿ ಹೊಂಚು ಹಾಕುತ್ತಿವೆ: ಮುನಿರತ್ನ

2022-23ನೇ ಸಾಲಿನ ಕಾಮಗಾರಿಗಳಿಗೆ ಕಾಲಮಿತಿ ನಿಗದಿ: ವರ್ಷಾನುಗಟ್ಟಲೆ ನಡೆಯುವ ಆಮೆಗತಿಯ ಕಾಮಗಾರಿಗಳಿಗೆ ಕಡಿವಾಣ ಹಾಕಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರಸಕ್ತ 2022-23ನೇ ಸಾಲಿನ ಕಾಮಗಾರಿಗಳನ್ನು ತ್ವರಿತವಾಗಿ ಇದೇ ವರ್ಷದಲ್ಲಿ ಪೂರ್ಣಗೊಳಿಸಲು ಸರ್ಕಾರದಿಂದಲೇ ಕಾಲಮಿತಿ ನಿಗದಿಪಡಿಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ರಾಜ್ಯದ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಮುನಿರತ್ನ ಹೇಳಿದರು. 

ಕಲಬುರಗಿಗಿಯ ಕೆ.ಕೆ.ಆರ್‌.ಡಿ.ಬಿ. ಮಂಡಳಿ ಸಭಾಂಗಣದಲ್ಲಿ ಮಂಡಳಿ ವ್ಯಾಪ್ತಿಗೆ ಒಳಪಡುವ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿ.ಇ.ಓ ಸೇರಿದಂತೆ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ಮುಂದಿನ ವಾರದೊಳಗೆ ಪ್ರಸಕ್ತ 2022-23ನೇ ಸಾಲಿಗೆ ಮಂಡಳಿಗೆ ಘೋಷಿಸಲಾದ ಮೈಕ್ರೋ ಯೋಜನೆಯ 1500 ಕೋಟಿ ರೂ. ಗಳ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗುವುದು. 

ಮಳೆ ಅವಾಂತರಕ್ಕೆ ಸಾವಿರಾರು ಎಕ್ಟೇರ್‌ನಷ್ಟು ಮಾವು ನಾಶ: ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಾಪತ್ತೆ!

ನಂತರ ಉಳಿದ 1500 ಕೋಟಿ ರೂ. ಮ್ಯಾಕ್ರೋ ಅನುದಾನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಪ್ಪಿಗೆ ನೀಡಲಾಗುವುದು. ಮ್ಯಾಕ್ರೋ ಅನುದಾನದಲ್ಲಿ ಈ ಭಾಗದ ಹಿಂದುಳಿದ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಇನ್ನು ಮೈಕ್ರೋ ಅನುದಾನದಡಿ ಇದೂವರೆಗೆ ಕ್ರಿಯಾ ಯೋಜನೆ ಅನುಮೋದನೆಗೆ ಸಲ್ಲಿಸದ ಜಿಲ್ಲೆಗಳಿಂದ ಕೂಡಲೆ ಪ್ರಸ್ತಾವನೆ ಪಡೆದು ಸೋಮವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಮಂಡಳಿ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ ಅವರಿಗೆ ಸೂಚಿಸಿದ ಸಚಿವ ಮುನಿರತ್ನ ಅವರು ಪ್ರಸಕ್ತ ವರ್ಷದಿಂದ ಇನ್ನು ಮುಂದೆ ಕ್ರಿಯಾ ಯೋಜನೆ ಅನುಮೋದನೆಯಾದ ನಂತರ ಯಾವುದೇ ಕಾಮಗಾರಿಯನ್ನು ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.