ಚುನಾವಣೆಗಳಲ್ಲಿ ಮತ ಪಡೆಯಲು ನನ್ನಿಂದ ಅನ್ಯ ಭಾಷೆಗಳನ್ನು ಮೊದಲು ಮಾತನಾಡಿಸಿದ್ದೇ ಡಿ.ಕೆ.ಸುರೇಶ್‌. ನಾನು ಬಿಜೆಪಿ ಸೇರಿದ ಕೂಡಲೇ ಹಿಂದಿನದೆಲ್ಲ ಮರೆತು ನನ್ನ ಮೇಲೆ ಭಾಷ ದ್ರೋಹದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದ ಮುನಿರತ್ನ 

ಬೆಂಗಳೂರು(ಏ.01): ನಾನು ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದನ್ನು ಸಾಬೀತುಪಡಿಸಿದಲ್ಲಿ ನೇಣುಗಂಬ ಏರುತ್ತೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಸವಾಲು ಎಸೆದಿದ್ದಾರೆ. ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು ತಾವು ಸಭೆಯೊಂದರಲ್ಲಿ ಮಾಡಿದ ಭಾಷಣದ ವಿಡಿಯೋ ಪ್ರದರ್ಶಿಸಿ, ಈಗಲೇ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರು ಪುರಾವೆ ತೋರಿಸಲಿ. ಅಲ್ಲೇ ನಾನು ನೇಣು ಬಿಗಿದುಕೊಳ್ಳುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದರು.

ಚುನಾವಣೆಗಳಲ್ಲಿ ಮತ ಪಡೆಯಲು ನನ್ನಿಂದ ಅನ್ಯ ಭಾಷೆಗಳನ್ನು ಮೊದಲು ಮಾತನಾಡಿಸಿದ್ದೇ ಡಿ.ಕೆ.ಸುರೇಶ್‌. ನಾನು ಬಿಜೆಪಿ ಸೇರಿದ ಕೂಡಲೇ ಹಿಂದಿನದೆಲ್ಲ ಮರೆತು ನನ್ನ ಮೇಲೆ ಭಾಷ ದ್ರೋಹದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಕಿಡಿಕಾರಿದರು.

News Hour Special with Munirathna: 'ನಿಮ್ಮನ್ನೆಲ್ಲಾ ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ರಂತೆ?'

ಈ ಹಿಂದೆ ಚುನಾವಣೆಗಳ ಪ್ರಚಾರದ ವೇಳೆ ನನ್ನಿಂದ ಐದು ಭಾಷೆಗಳಲ್ಲಿ ಸುರೇಶ್‌ ಮಾತನಾಡಿಸಿದ್ದಾರೆ. ಇವರಿಗೆ ತಮಿಳಿನಲ್ಲಿ ಮಾತನಾಡಿ ಸರ್‌. ನನ್ನ ಎಂಪಿ ಚುನಾವಣೆಗೆ ಅನುಕೂಲವಾಗುತ್ತದೆ. ತೆಲುಗಿನಲ್ಲಿ ಮಾತನಾಡಿ ವೋಟ್‌ ಬರುತ್ತೆ. ಉರ್ದುವಿನಲ್ಲಿ ಮಾತನಾಡಿ, ಮಲಯಾಳಿಯಲ್ಲಿ ಮಾತನಾಡಿ ವೋಟ್‌ ಬರುತ್ತೆ ಎನ್ನುತ್ತಿದ್ದ ಸುರೇಶ್‌. ಈಗ ನಾನು ಬಿಜೆಪಿಗೆ ಸೇರಿದ ಹಿಂದಿನದೆಲ್ಲ ಮರೆತು ಕೀಳು ಮಟ್ಟದ ರಾಜಕಾರಣಕ್ಕಿಳಿದಿದ್ದಾರೆ ಎಂದು ಟೀಕಿಸಿದರು.

ಜಾತಿ, ಧರ್ಮದ ಮೇಲೆ ಜೀವನ ಮಾಡಬೇಡಿ. ಬೆಂಗಳೂರು ನಗರ ಶಾಂತವಾಗಿದೆ. ನಗರದಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಕೇವಲ ರಾಜರಾಜೇಶ್ವರಿ ನಗರಕ್ಕೆ ಮಾತ್ರವೇಕೆ ಬಂದು ಸಂಸದರು ಮಾತನಾಡುತ್ತಾರೆ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ನಿಮ್ಮ ಕಷ್ಟಕ್ಕೆ ಇಲ್ಲದ್ದವರನ್ನು ಸೇರಿಸಬೇಡಿ ಎಂದು ಜನತೆಗೆ ಹೇಳಿದ್ದೇನೆ ಹೊರತು ಭಾಷೆ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.