ಬಿಜೆಪಿ ಹೀನಾಯ ಸೋಲಿನಿಂದ ಮೋದಿ-ಶಾ ಈವರೆಗೂ ಚೇತರಿಸಿಕೊಂಡಿಲ್ಲ: ಎಂಬಿಪಾ ಲೇವಡಿ
ಬಿಜೆಪಿ- ಜೆಡಿಎಸ್ ಮೈತ್ರಿ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು. ಇದುವರೆಗೆ ಜೆಡಿಎಸ್, ಬಿಜೆಪಿಯ ಅನಧಿಕೃತ ‘ಬಿ’ ಟೀಂ ಆಗಿತ್ತು. ಈಗ ಅಧಿಕೃತವಾಗಿ ಬಿಜೆಪಿ ‘ಬಿ’ ಟೀಂ ಆಗಿದೆ. ಹೀಗಾಗಿ, ಜೆಡಿಎಸ್‌ನ ಜಾತ್ಯತೀತ ಮತಗಳು ಕಾಂಗ್ರೆಸ್ ಪರವಾಗಿ ಬರಲಿವೆ: ಸಚಿವ ಎಂ.ಬಿ.ಪಾಟೀಲ
ವಿಜಯಪುರ(ಅ.25): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು, ಆ ಶಾಕ್‌ನಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಈವರೆಗೂ ಚೇತರಿಸಿಕೊಂಡಿಲ್ಲ. ಹಾಗಾಗಿ, ಕರ್ನಾಟಕದಲ್ಲಿ ಈವರೆಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿಲ್ಲ ಎಂದು ಬೃಹತ್ ಹಾಗೂ ಮಧ್ಯಮ, ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ ಲೇವಡಿ ಮಾಡಿದರು
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಬಿಜೆಪಿಗೆ ಇನ್ನು ಮೇಲೆ ರಾಜ್ಯದಲ್ಲಿ ಭವಿಷ್ಯವಿಲ್ಲ. ಅದು ಮುಳುಗುವ ಹಡಗಲ್ಲ. ಮುಳುಗಿದ ಹಡಗು. ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದರು.
ಸಚಿವ ಸಂಪುಟ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ್
ಈ ಹಿಂದೆ ಚೈತ್ರಾ ಮತ್ತಿತರರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಮೋಸ ಮಾಡಿರುವ ಪ್ರಕರಣ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಅವಧಿಯಲ್ಲಿ ನಾವು ಶೇ.40 ಕಮಿಷನ್ ಸರ್ಕಾರವನ್ನು ನೋಡಿದ್ದೇವೆ ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು. ಇದುವರೆಗೆ ಜೆಡಿಎಸ್, ಬಿಜೆಪಿಯ ಅನಧಿಕೃತ ‘ಬಿ’ ಟೀಂ ಆಗಿತ್ತು. ಈಗ ಅಧಿಕೃತವಾಗಿ ಬಿಜೆಪಿ ‘ಬಿ’ ಟೀಂ ಆಗಿದೆ. ಹೀಗಾಗಿ, ಜೆಡಿಎಸ್‌ನ ಜಾತ್ಯತೀತ ಮತಗಳು ಕಾಂಗ್ರೆಸ್ ಪರವಾಗಿ ಬರಲಿವೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಹೀನಾಯ ಸ್ಥಿತಿಯಲ್ಲಿರುವ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಬಿಜೆಪಿ ಮತ್ತಷ್ಟು ಅಧೋಗತಿಗೆ ಹೋಗಲಿದೆ ಎಂದು ಭವಿಷ್ಯ ನುಡಿದರು.