ನನ್ನ ಹಾಗೂ ಡಿ.ಕೆ ಶಿವಕುಮಾರ್‌ ಅವರ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಮ್ಮ ಸಂಬಂಧಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. 

ಬೆಂಗಳೂರು (ಜೂ.19): ನನ್ನ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಮ್ಮ ಸಂಬಂಧಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಎಂ.ಬಿ. ಪಾಟೀಲ್‌ ಹೆಗಲ ಮೇಲೆ ಬಂದೂಕು ಇಟ್ಟು ಡಿ.ಕೆ. ಶಿವಕುಮಾರ್‌ಗೆ ಶೂಟ್‌ ಮಾಡಿದ್ದಾರೆಂಬ ಸಂಸದ ಪ್ರತಾಪ್‌ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್‌ ಮಾಡುವವರು ಅಲ್ಲ. 

ನಾನೂ ಸಹ ಅಷ್ಟೇ. ಏನೇ ಇದ್ದರೂ ನೇರಾ ನೇರ ನಡೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ತಾಕತ್ತಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ನನ್ನದೂ ಅದೇ ನಡೆ ಎಂದು ಸ್ಪಷ್ಟಪಡಿಸಿದರು. ಪ್ರತಾಪ್‌ ಸಿಂಹ ಅವರ ತಲೆ ಕೆಟ್ಟಿದೆ. ಇನ್ನೂ ಚಿಲ್ಲರೆ ಮನಸ್ಥಿತಿಯಿಂದ ಹೊರ ಬಂದಿಲ್ಲ. ಚೂರಾದರೂ ಪ್ರಬುದ್ಧತೆಯಿಂದ ನಡೆದುಕೊಳ್ಳಲಿ. ಬೇಕಾಬಿಟ್ಟಿಹೇಳಿಕೆ ನೀಡಿದರೆ ಅವರ ವ್ಯಕ್ತಿತ್ವವೇ ಹಾಳಾಗುತ್ತದೆ ಎಂದು ಹೇಳಿದರು.

ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ತುಂಬಾ ದಿನ ಉಳಿಯಲ್ಲ: ಯಡಿಯೂರಪ್ಪ

ಕೈಗಾರಿಕಾಭಿವೃದ್ಧಿಗೆ ಪ್ರತ್ಯೇಕ ವಿಷನ್‌ ಗ್ರೂಪ್‌: ರಾಜ್ಯದಲ್ಲಿ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಪ್ರತ್ಯೇಕ ವಿಷನ್‌ ಗ್ರೂಪ್‌ ರಚನೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಅಧೀನದಲ್ಲಿನ ವಿವಿಧ ನಿಗಮ ಮತ್ತು ಪ್ರಾಧಿಕಾರಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿನ ಕೈಗಾರಿಕಾ ವಲಯಗಳಲ್ಲಿ 7 ಸೆಕ್ಟರ್‌ಗಳನ್ನು ಗುರುತಿಸಲಾಗಿದೆ. ಅವುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸದಾಗಿ ವಿಷನ್‌ ಗ್ರೂಪ್‌ ರಚಿಸಿ, ಅದರ ಮೂಲಕ ಯೋಜನೆ ರೂಪಿಸಲಾಗುವುದು ಎಂದರು.

ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಹಾಲಿ ಇರುವ ಕೈಗಾರಿಕಾ ನೀತಿಯಲ್ಲೂ ಬದಲಾವಣೆ ತರುವ ಉದ್ದೇಶವಿದೆ. ಕೈಗಾರಿಕೆಗಳ ಬೆಳವಣಿಗೆಗಳ ಅಗತ್ಯಕ್ಕೆ ತಕ್ಕಂತೆ ನೀತಿಯಲ್ಲಿನ ಕೆಲ ಅಂಶಗಳನ್ನು ತೆಗೆದು, ಹೊಸದಾಗಿ ಕೆಲ ಅಂಶಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.ಬೆಂಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಬೆಂಗಳೂರು ಹೊರತುಪಡಿಸಿ ಬೇರೆ ನಗರ, ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಪ್ರಮುಖವಾಗಿ ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ಕಡೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಅದಕ್ಕೆ ಬೇಕಾದ ಎಲ್ಲ ನೆರವನ್ನೂ ಸರ್ಕಾರ ನೀಡಲಿದೆ ಎಂದು ತಿಳಿಸಿದರು.

‘ಅಕ್ಕಿಭಾಗ್ಯ​’ದಲ್ಲಿ ಕಾಂಗ್ರೆಸ್‌ ಬಣ್ಣ ಬಯ​ಲು: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ

ಉಪನಗರ ರೈಲು ವಿಸ್ತರಣೆ: ಉಪನಗರ ರೈಲು ಯೋಜನೆ ವಿಸ್ತರಣೆ ಮಾಡುವ ಕುರಿತಂತೆ ಮೂಲಸೌಕರ್ಯ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಮೈಸೂರು ಮತ್ತು ದಾಬಸ್‌ಪೇಟೆ ಸೇರಿದಂತೆ ವಿವಿಧ ಕಡೆಗಳಿಗೆ ಯೋಜನೆಯ ಮಾರ್ಗ ವಿಸ್ತರಿಸಲು ನಿರ್ಧರಿಸಲಾಗಿದೆ. ಎರಡು ಹಂತಗಳಲ್ಲಿ ವಿಸ್ತರಣೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಎಂ.ಬಿ.ಪಾಟೀಲ್‌ ತಿಳಿಸಿದರು.