ತುಮಕೂರು (ಜ.27):  ನನ್ನ ಒಳ್ಳೆತನ ಮುಳುವಾಗಿದ್ದಕ್ಕೆ ರೆಬೆಲ್‌ ಆಗಬೇಕಾದ ಸನ್ನಿವೇಶ ಸೃಷ್ಟಿಯಾಯಿತು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಅವರು ತುಮಕೂರಿನಲ್ಲಿ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಬ್ಬ ಸಚಿವನಿಗೆ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದರೆ ಯಾರಿಗೆ ತಾನೆ ಬೇಸರವಾಗುವುದಿಲ್ಲ. ಹಾಗಾಗಿ ಸಹಜವಾಗಿಯೇ ನನಗೂ ಬೇಸರವಾಗಿದ್ದು ನಿಜ ಎಂದರು.

ಕೊನೆಗೂ ಮಾಧುಸ್ವಾಮಿ ಬೇಡಿಕೆಗೆ ಅಸ್ತು ಎಂದ ಸಿಎಂ.. ಸೈನಿಕನಿಗೆ ಶಾಕ್! .

ನನಗೆ ಮುಖ್ಯಮಂತ್ರಿಗಳು ಸಣ್ಣ ನೀರಾವರಿ ಖಾತೆ ಬಿಟ್ಟು ಕೊಡುವಂತೆ ಹೇಳಿದಾಗ, ನಾನು ಈ ಖಾತೆಯಲ್ಲಿ ರೈತರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಈಗಾಗಲೇ ಕೈಗೊಂಡಿದ್ದೇನೆ. ಹಾಗಾಗಿ ಈ ಖಾತೆ ನನಗೆ ಬಿಟ್ಟು ಬಿಡಿ ಎಂದು ಮೊದಲು ಕೇಳಿದ್ದೆ. ಆದರೆ ಮುಖ್ಯಮಂತ್ರಿಗಳು ನನಗೆ ವೈದ್ಯಕೀಯ ಶಿಕ್ಷಣ ಖಾತೆ ಮತ್ತು ಕನ್ನಡ ಸಂಸ್ಕೃತಿ ಖಾತೆಯನ್ನು ಕೊಟ್ಟರು. ಆಗ ನಾನು ಏನೂ ಹೇಳಲಿಲ್ಲ. ಇದಾದ ಒಂದು ದಿನದ ಬಳಿಕ ನನಗೆ ಗೊತ್ತಿಲ್ಲದಂತೆ ಖಾತೆ ಬದಲಾಯಿಸಿ ವಕ್ಫ್ ಮತ್ತು ಹಜ್‌ ಖಾತೆಯನ್ನು ನೀಡಿದರು. ಆಗ ನನಗೆ ಸಹಜವಾಗಿಯೇ ಮನಸ್ಸಿಗೆ ತುಂಬಾ ನೋವಾಯಿತು. ನನ್ನ ಒಳ್ಳೆಯತನವೇ ನನಗೆ ಮುಳುವಾಯಿತಲ್ಲ ಎಂದು ರೆಬೆಲ್‌ ಆಗಬೇಕಾದ ಸನ್ನಿವೇಶ ಸೃಷ್ಟಿಯಾಯಿತು ಎಂದರು.

ನಾನು ಕೆಲಸ ಮಾಡದಿದ್ದರೆ ಖಾತೆ ವಾಪಸ್‌ ಪಡೆಯಲಿ, ಇದ್ಯಾವ ಕಾರಣವೂ ಇಲ್ಲದೆ ನನಗೆ ನಾಲ್ಕು ಬಾರಿ ಖಾತೆ ಬದಲಾಯಿಸಿದ್ದರಿಂದ ತುಂಬಾ ನೋವಾಗಿ ಗಣರಾಜ್ಯೋತ್ಸದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವ ಸ್ಥಾನಕ್ಕೆ ಗುಡ್‌ ಬೈ ಹೇಳುತ್ತೇನೆ ಎಂದು ಹೇಳಿದ್ದೆ. ಆಗ ಪಕ್ಷದ ಕೆಲ ಹಿರಿಯರು ನನ್ನೊಂದಿಗೆ ಮಾತನಾಡಿದ್ದರು. ನಿನ್ನೆ ಮತ್ತೆ ಸಣ್ಣ ನೀರಾವರಿ ಖಾತೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.

ನಾನು ರೈತರ ಬದುಕಿನೊಂದಿಗೆ ನಂಟು ಇರುವ ಖಾತೆ ಕೊಡುವಂತೆ ಮಾತ್ರ ಕೇಳಿದ್ದೆ. ಇಂತಹದ್ದೇ ಖಾತೆ ಬೇಕು ಎಂದು ಕೇಳಿರಲಿಲ್ಲ. ಆದರೂ ನಾಲ್ಕು ಖಾತೆ ಬದಲಾಯಿಸಿದ್ದರಿಂದ ರೆಬೆಲ್‌ ಆಗಬೇಕಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2011 ರಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಬೆನ್ನತ್ತಿ ಚಾಲನೆ ಕೊಡಿಸಿರುವುದಾಗಿ ನಾನು ಹೇಳಿದ್ದೇನೆ ಹೊರತು ನನ್ನೊಬ್ಬನಿಂದಲೇ ಕಾಮಗಾರಿ ಆಯಿತು ಎಂದು ನಾನು ಹೇಳುವುದಿಲ್ಲ ಎಂದು ಅವರು ಹೇಳಿದರು.