ಮೈಸೂರು, (ಮಾ.27): ರಮೇಶ್ ಜಾರಕಿಹೊಳಿ ಸೆಕ್ಸ್ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದು, ಇದು ಭಾರೀ ಸಂಚಲನ ಮೂಡಿಸಿದೆ.

ಅದರಲ್ಲೂ ಬಿಜೆಪಿ ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು, ಡಿಕೆ ಶಿವಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ಅಲ್ಲದೇ ಈ ಸಿ.ಡಿ. ಕೇಸ್‌ನಲ್ಲಿ ಮತ್ತೆ ತಿಹಾರ್ ಜೈಲಿಗೆ ಅಂತೆಲ್ಲಾ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮತ್ತೊಂದೆಡೆ ಸಚಿವ ಮಾಧುಸ್ವಾಮಿ ಮಾತ್ರ ಡಿಕೆಶಿ ಪರ ಸಾಫ್ಟ್‌ ಕಾರ್ನರ್‌ ತೋರಿರುವುದು ಅಚ್ಚರಿಗೆ ಕಾರಣವಾಗಿದೆ.

'ಕಾಂಗ್ರೆಸ್ ಮಹಾನಾಯಕ, BJP ಯುವರಾಜ: ಆ ಇಬ್ಬರು ಸಿಡಿ ಖರೀದಿದಾರರು' 

ಇಂದು(ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿ.ಕೆ.ಶಿವಕುಮಾರ್‌ರನ್ನ ಹಲವು ವರ್ಷದಿಂದ ನೋಡಿದ್ದೇನೆ. ಅವರು ಹಾಗೇ ಮಾಡಿರಲಾರರು ಅಂದಿಕೊಂಡಿದ್ದೇನೆ.  ಆ ಯುವತಿ ಅವರ ಹೆಸರು ಹೇಳಿದ್ದಾಳೆ. ಅದನ್ನ ಬಿಟ್ಟರೆ ಬೇರೆ ಯಾವ ಗಂಭೀರ ಸಾಕ್ಷ್ಯವನ್ನೂ ಆಕೆ ನೀಡಿಲ್ಲ. ಹಾಗಾಗಿ ಏನಾಗುತ್ತದೆಂದು ನೋಡೋಣ ಎಂದು ಹೇಳುವ ಮೂಲಕ .ಮಾಧುಸ್ವಾಮಿ ಸಾಫ್ಟ್ ಕಾರ್ನರ್ ತೋರಿದ್ದಾರೆ.

ಘಟನೆಯಲ್ಲಿ ಏನೋ ಇದೆ ಅಂತ ತನಿಖೆ ಆದೇಶ ಮಾಡಲಾಗಿದೆ. ಬಂಧನ ಮಾಡಲು ಅವಕಾಶ ಇದೆಯೋ ಎಂದು ನೋಡಬೇಕು, ದೂರುದಾರರು ಬರಬೇಕು. ಇವೆಲ್ಲವನ್ನು ನೋಡಿಕೊಂಡು ನಾವು ಮಾತನಾಡಬೇಕಿದೆ ಎಂದು ಹೇಳಿದರು.

ಈ ಘಟನೆಯಲ್ಲಿ ನರೇಶ್ ಗೊತ್ತಿಲ್ಲ ಎಂದು ಹೇಳೋಕಾಗೋಲ್ಲ. ಆಕೆ ಮಾತನಾಡಿರೋದು, ಡಿಕೆಶಿಯೂ ಹೇಳಿರೋದನ್ನು ಕೇಳಿದ್ದೇವೆ. ಆದರೆ ನರೇಶ್ ಬೇರೆ ಕಥೆ ಹೇಳುತ್ತಿದ್ದಾರೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಿ.ಡಿ.ಕೇಸ್: ಯುವತಿಯ ಮತ್ತೊಂದು ಆಡಿಯೋ ಬಹಿರಂಗ, ಮಹಾನಾಯಕನ ಹೆಸ್ರು ಪ್ರಸ್ತಾಪ! 

ಸಿಡಿ ಕೇಸ್‌ನಲ್ಲಿ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ರಮೇಶ್ ಜಾರಿಹೊಳಿ ಅವರನ್ನು ಬಂಧಿಸಬಹುದು. ಇಲ್ಲವಾದಲ್ಲಿ ಅವರನ್ನ ಬರೀ ವಿಚಾರಣೆ ಮಾಡಿ ಬಿಡಬಹುದು ಅಷ್ಟೇ. ಅದನ್ನು ಮೀರಿ ನೇರವಾಗಿ ಚಾರ್ಜ್‌ಶೀಟ್ ಕೂಡ ಹಾಕಬಹುದು. ಈ ಘಟನೆ ಬಹಳ ಗೊಂದಲಮಯವಾಗಿದೆ. ಈ ಕೇಸ್ ತನಿಖೆ ಪೊಲೀಸ್‌ಗೂ ಕಷ್ಟ ಇದೆ. ಆಕೆ ದೃಢವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆಡಿಯೋ ಡಬ್ ಅಂತಾರೆ. ವಿಡಿಯೋ ಎಡಿಟ್ ಅಂತಾರೆ. ತನಿಖೆ ನಡೆದ ಮೇಲಷ್ಟೇ ನಾವು ಹೀಗಾಗಿದೆ ಅಂತ ತೀರ್ಮಾನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಇಂತಹ ಘಟನೆಗಳು ರಾಜ್ಯಕ್ಕೆ ಮುಜುಗರ ಆಗುತ್ತೆ, ಬ್ಲಾಕ್‌ಮಾರ್ಕ್‌ ಆಗೋದು ಅನ್ನೋದಕ್ಕಿಂತ ರಾಜ್ಯಕ್ಕೆ ಮುಜುಗರ ತರೋದು ನಿಜ. ನಾವು ಪ್ರಬುದ್ದರಾಗಿದ್ದರೆ ವೈಯುಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ. ಅದು ಅವರ ವೈಯಕ್ತಿಕ ವಿಚಾರ ಅಂತ ಸುಮ್ಮನಾಗಬಹುದಿತ್ತು. ಆದರೆ ನಾವು ಎಲ್ಲರೂ ಸೇರಿಕೊಂಡು ಎಷ್ಟು ತೇಜೋವಧೆ ಮಾಡಿಬಿಟ್ಟಿದ್ದೀವಿ ಎಂದರು.