ವಿಜಯೇಂದ್ರ ಮೊದಲು ಶಾಸಕ ಯತ್ನಾಳ್‌ಗೆ ಉತ್ತರಿಸಿ: ಸಚಿವ ಮಧು ಬಂಗಾರಪ್ಪ
ಚೆಕ್ ಬೌನ್ಸ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ವಿರುದ್ಧ ಮಾತನಾಡುವ ಮುನ್ನ ಯತ್ನಾಳ್ ಆರೋಪಕ್ಕೆ ಮೊದಲು ಉತ್ತರ ಕೊಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.
ಶಿವಮೊಗ್ಗ (ಜ.03): ಚೆಕ್ ಬೌನ್ಸ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ವಿರುದ್ಧ ಮಾತನಾಡುವ ಮುನ್ನ ಯತ್ನಾಳ್ ಆರೋಪಕ್ಕೆ ಮೊದಲು ಉತ್ತರ ಕೊಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಕೊರೋನಾ ಸಂದರ್ಭದಲ್ಲಿ ಸುಮಾರು ₹40 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಅವರು ಆರೋಪ ಮಾಡಿದ್ದಾರೆ. ₹45 ಮಾಸ್ಕ್‌ಗೆ ₹450 ಬಿಲ್ ಮಾಡಿದ್ದಾರೆ. ಕೋಟ್ಯಂತರ ರು. ಭ್ರಷ್ಟಾಚಾರ ಆಗಿದೆ.
ಅವರು ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುದಕ್ಕೆ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತರಿಸಲಿ ಎಂದು ಕುಟುಕಿದರು. ವಿಜಯೇಂದ್ರ ಅವರ ತಟ್ಟೆಯಲ್ಲಿ ಸತ್ತು ಕೊಳೆತಿರುವ ಹೆಗಣ ಇದೆ. ಯತ್ನಾಳ್ ಅದನ್ನು ಹೇಳುತ್ತಿದ್ದು, ಅವರು ನೋಡುವುದನ್ನು ಬಿಟ್ಟು ಕ್ಲೀನ್ ಆಗಿರುವ ನಮ್ಮ ತಟ್ಟೆಯನ್ನು ಇಣುಕಿನೋಡುತ್ತಿದ್ದಾರೆ. ಇವತ್ತು ಅವರಿಗೆ ಶಿಕಾರಿಪುರದಲ್ಲಿ ಜನ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಎಂದರೆ ಅದರಲ್ಲಿ ಬಂಗಾರಪ್ಪ ಅವರ ಋಣ ಇದೆ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ ಎಂದು ಹರಿಹಾಯ್ದರು.
ಮುಂದಿನ ಸಂಪುಟದಲ್ಲಿ ಮಿನಿಸ್ಟರ್ ಆಗುತ್ತಾರೆ ಶಿವಲಿಂಗೇಗೌಡ: ಸಚಿವ ರಾಜಣ್ಣ ಭವಿಷ್ಯ
ಸಾವಿನಲ್ಲೂ ಅಶೋಕ್ ಭ್ರಷ್ಟಾಚಾರ: ವಿಪಕ್ಷ ನಾಯಕ ಆರ್.ಅಶೋಕ್ ಅವರು ನನ್ನ ರಾಜಿನಾಮೆ ಕೇಳಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಸಾವಿನಲ್ಲೂ ಭ್ರಷ್ಟಾಚಾರ ಮಾಡಿದ್ದು ಯಾರಿಗೂ ಗೊತ್ತಿಲ್ಲ ಎಂದುಕೊಳ್ಳಬೇಡಿ. ಆಗ ನಾವು ಅದನ್ನು ಹೇಳಿದ್ದಕ್ಕೆ ಕಾಂಗ್ರೆಸ್ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ, ಈಗ ನಿಮ್ಮ ಶಾಸಕರೇ ನಿಮ್ಮ ಬಂಡವಾಳ ಬಿಚ್ಚಿಟ್ಟಿದ್ದಾರೆ. ಇನ್ನು ಅವರ ಕ್ಷೇತ್ರದಲ್ಲಿ ಬಂಗಾರಪ್ಪ ಅವರ ಹೆಸರಿನಲ್ಲಿ ಕೊಡುತ್ತಿರುವ ಆಶ್ರಯ ಮನೆಗಳಲ್ಲೂ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹಾಗೇನಾದರೂ ಭ್ರಷ್ಟಾಚಾರ ನಡೆದಿದ್ದರೆ ಇದನ್ನು ಸುಮ್ಮನೆ ಬಿಡಲ್ಲ ಎಂದು ಕುಟುಕಿದರು.
ಧಮ್ ಇದ್ದರೆ ಕಟೀಲು ಸ್ಪರ್ಧಿಸಲಿ: ಇದೇ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಎಂಎಲ್‌ಸಿ ರವಿಕುಮಾರ್ ಎಂಬ ಯೂಸ್ ಲೆಸ್‌ಗಳು ನನ್ನ ವಿರುದ್ಧ ಮಾತನಾಡಿದ್ದಾರೆ. ಮತ ಪಡೆದು ಗ್ರಾಪಂ ಚುನಾವಣೆಯನ್ನು ಗೆಲ್ಲದ ವಿಧಾನ ಪರಿಷತ್ತು ಸದಸ್ಯ ರವಿಕುಮಾರ್ ಅವರನ್ನು ಈ ರೀತಿ ಮಾತನಾಡುವುದಕ್ಕೆ ಬಿಜೆಪಿಯವರು ಬಿಟ್ಟಿದ್ದಾರೆ. ಇನ್ನು ಸಾವಿನಲ್ಲಿ ರಾಜಕೀಯ ಮಾಡುವ ವ್ಯಕ್ತಿ ನಳೀನ್‌ಕುಮಾರ್ ಕಟೀಲ್ ನನ್ನ ವಿರುದ್ಧ ಮಾತನಾಡಿದ್ದಾರೆ. ಅವರಿಗೆ ಧಮ್ ಇದ್ದರೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು. ನಾನೇ ಕರಾವಳಿಗೆ ಬರುತ್ತೇನೆ ಎಂದು ಸವಾಲು ಎಸೆದರು.
ಗ್ಯಾರಂಟಿ ಯೋಜನೆಗಳ ಪಡೆಯದಿರಿ: ನನ್ನ ಖಾಸಗಿ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ನೀಚತನ ಬಿಜೆಪಿ ಮಾಡುತ್ತಿದೆ. ಈ ಹಿಂದೆಯೂ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ, ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇವರು ಶಾಲಾ ಮಕ್ಕಳ ಕೈಗೆ ಪೊರಕೆ ಕೊಟ್ಟಿದ್ದರು. ನಾವು ಅದು ತಪ್ಪು ಎಂದು ಕ್ರಮ ಕೈಗೊಳ್ಳುತ್ತಿದ್ದೇವೆ. ಮಕ್ಕಳಿಗೆ ಒಂದು ಮೊಟ್ಟೆ ಕೊಡುತ್ತಿದ್ದೇವು, ನಾವು 2 ಮೊಟ್ಟೆಗಳನ್ನು ಕೊಡುತ್ತಿದ್ದೇವೆ. ಇವರು ಮಕ್ಕಳನ್ನು ನೆಲದ ಮೇಲೆ ಕೂರಿಸಿದ್ದರು, ನಾವು ಬೆಂಚ್ ಮೇಲೆ ಕೂರಿಸಿದ್ದೇವೆ. ರಾಜ್ಯದ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುವ ಇವರು ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆಗಳನ್ನು ಪಡೆಯಬೇಡಿ ಎಂದು ಕರೆ ನೀಡುವಂತೆ ಸವಾಲು ಹಾಕಿದರು.
ಯುವನಿಧಿ ಯೋಜನೆಯಡಿ ಹಣ ಸಂದಾಯ ಮಾಡುವ ಕಾರ್ಯಕ್ರಮ ಜ.12ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಯುವನಿಧಿಗೆ ಈವರೆಗೂ 20 ಸಾವಿರ ಮಂದಿ ನೋಂದಣಿ ಆಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ನೋಂದಣಿ ಆಗುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮುಖಂಡರಾದ ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್‌ಪಿ ದಿನೇಶ್ ಸೇರಿದಂತೆ ಹಲವರಿದ್ದರು.
ವರ್ಗಾವಣೆ ಮಾಡದಂತೆ ಬಿಎಸ್‌ವೈ, ಮಕ್ಕಳಿಂದ ಸಿಎಂಗೆ ಒತ್ತಡ: ಶಿವಮೊಗ್ಗ- ಶಿಕಾರಿಪುರದಲ್ಲಿ ಯಾವುದಾದರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ವರ್ಗಾವಣೆ ಮಾಡಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಅವರು ಈಗಲೂ ತಮ್ಮದೇ ಸರ್ಕಾರ ಇದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ಬಿಜೆಪಿ ರಾಮ ಎನ್ನೋರಿಗೆ ಕೇಂದ್ರ ನಾಯಕರು ಆಹ್ವಾನ ಕೊಟ್ಟಿಲ್ಲ: ಕೆ.ಎಸ್.ಈಶ್ವರಪ್ಪ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗದೇ ಇದ್ದರೆ ನಮಗೆ ಇಲ್ಲೇ ಇರುವ ರಾಮನನ್ನು ಪೂಜಿಸಿಕೊಳ್ಳುತ್ತೇವೆ. ಶ್ರೀರಾಮ ಹೃದಯದಲ್ಲಿದ್ದಾನೆ. ಆತ ಎಲ್ಲರಿಗೂ ಸೇರಿದ್ದು, ಬಿಜೆಪಿಯವರಿಗೆ ಮಾತ್ರ ಸೀಮಿತವಲ್ಲ. ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಆರ್ಥಿಕ ಅವ್ಯವಹಾರ ಆಗಿದೆ ಎಂಬ ದೂರುಗಳನ್ನು ಕೇಳಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ತನಿಖೆ ಮಾಡಿಸಬೇಕು. ಶ್ರೀರಾಮ ಪವಿತ್ರ ದೇವರು. ಅದಕ್ಕೆ ಅವ್ಯವಹಾರದ ಮಂದಿರ ಎಂಬ ಕಳಂಕ ಅಂಟಬಾರದು ಎಂದು ಹೇಳಿದರು.