ಧರ್ಮಸ್ಥಳಕ್ಕೆ ನಾನು ಬಿರ್ತಿನಿ, ನೀವು ಬನ್ನಿ ಆಣೆ ಮಾಡಿ: ಸಿ.ಟಿ.ರವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸವಾಲು
ವಿಧಾನಪರಿಷತ್‌ನಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ಆಣೆ- ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇರವಾಗಿ ಸವಾಲು ಹಾಕಿದ್ದಾರೆ.
ಬೆಳಗಾವಿ (ಡಿ.25): ವಿಧಾನಪರಿಷತ್‌ನಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ಆಣೆ- ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇರವಾಗಿ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾರಿಗೂ ಸವಾಲು ಹಾಕಲ್ಲ, ಜವಾಬ್ ಕೇಳುತ್ತಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಸ್ಟಂಟ್ ಬೇಕಿಲ್ಲ. ಮಾಡಬಾರದ್ದನ್ನು ಮಾಡಿ ಬಿಜೆಪಿ ನಾಯಕರು ವಿಜೃಂಭಿಸುತ್ತಿದ್ದಾರೆ.
ಆಡಬಾರದ್ದನ್ನು ಆಡಿರುವ ಸಿ.ಟಿ. ರವಿ ಹೂವು, ಹಾರ, ತುರಾಯಿ ಹಾಕಿಸಿಕೊಳ್ತಿದ್ದಾರೆ, ಪಟಾಕಿ ಹೊಡಿಸಿಕೊಳ್ತಿದ್ದಾರೆ. ಹಾಗಾಗಿ ಧರ್ಮಸ್ಥಳಕ್ಕೆ ಆಹ್ವಾನಿಸುತ್ತಿದ್ದೇನೆ ಎಂದರು. ಧರ್ಮಸ್ಥಳ ಕ್ಷೇತ್ರದ ಮಂಜುನಾಥನನ್ನು ನಾನು ನಂಬುತ್ತೇನೆ. ದೇವಾನು ದೇವತೆಗಳನ್ನೂ ನಾನು ನಂಬುತ್ತೇನೆ. ಸಿ.ಟಿ. ರವಿ ಅವರ ಚಿಕ್ಕಮಗಳೂರಿಗೆ ಧರ್ಮಸ್ಥಳ ತುಂಬಾ ಹತ್ತಿರವಿದೆ. ಅವರೂ ದೇವರನ್ನು ನಂಬುತ್ತಾರೆ. ದತ್ತಮಾಲೆ ಹಾಕುತ್ತಾರೆ. ದತ್ತ ಪೀಠಕ್ಕೆ ಹೋಗುತ್ತಾರೆ. ಆ ಪದ ಬಳಸಿಲ್ಲ ಎಂದರೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬನ್ನಿ, ನಾನೂ ಬರುತ್ತೇನೆ ಎಂದು ಹೆಬ್ಬಾಳಕರ ಹೇಳಿದರು.
ಅವಾಚ್ಯ ಪದ ಬಳಸಿದ್ದಕ್ಕೆ ನಾನೇ ಸಾಕ್ಷಿ: ಸಿ.ಟಿ.ರವಿಯವರು ವಿಧಾನಪರಿಷತ್ತಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ್ದು ಸತ್ಯ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಆ ಪದವನ್ನು ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿ ಬಿಟ್ಟೆ. ಏನು ಇಂತಹ ಪದಗಳನ್ನು ಬಳಸುತ್ತಿದ್ದಾರಲ್ಲ ಅಂದುಕೊಂಡೆ. ತಕ್ಷಣ ನಾನು ಲಕ್ಷ್ಮೀ ಅವರ ಬಳಿಗೂ ಹೋದೆ. ಆಗ ಅವರು ಕೂಡ ನನಗೆ ರವಿ ಬಳಸಿದ ಪದವನ್ನು ಹೇಳಿದರು. ರವಿ ಬಳಸಿದ್ದು ಫ್ರಸ್ಟ್ರೇಟ್ ಎಂಬ ಪದ ಅಲ್ಲ.
ಸಿ.ಟಿ.ರವಿ ಅವಾಚ್ಯ ಶಬ್ದ ಕೇಸ್ ಸಿಐಡಿಗೆ: ತನಿಖಾ ತಂಡ ರಚನೆ
ಅದಕ್ಕೆ ನಾನೇ ಸಾಕ್ಷಿ. ಈಗ ಸಿಂಪಥಿ ಗಿಟ್ಟಿಸಿಕೊಳ್ಳಲು ರವಿ ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಹೀಗಾಗಿ, ಅವರು ರವಿ ಪರ ನಿಂತಿದ್ದಾರೆ ಎಂದು ಅವರು ಕಿಡಿಕಾರಿದರು. ಸಿ.ಟಿ.ರವಿಯನ್ನು ಪೊಲೀಸರು ಎನ್ ಕೌಂಟರ್ ಮಾಡಲು ಯತ್ನಿಸಿದರು, ಅವರ ಕೊಲೆ ಮಾಡುವ ಯತ್ನ ನಡೆದಿತ್ತು ಎಂಬುದೆಲ್ಲಾ ಶುದ್ಧ ಡ್ರಾಮಾ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಬರಿ ನಾಟಕ ಎಂದು ಅವರು ಹೇಳಿದರು.