ಸಿ.ಟಿ.ರವಿ ಅವಾಚ್ಯ ಶಬ್ದ ಕೇಸ್ ಸಿಐಡಿಗೆ: ತನಿಖಾ ತಂಡ ರಚನೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸದನದಲ್ಲೇ ಅವಾಚ್ಯವಾಗಿ ನಿಂದಿಸಿದರು ಎನ್ನಳಾದ ಪ್ರಕರಣ ಹಾಗೂ ಸಚಿವರ ಸಹಚರರ ವಿರುದ್ಧ ಹಲ್ಲೆ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಬೆಂಗಳೂರು (ಡಿ.25): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸದನದಲ್ಲೇ ಅವಾಚ್ಯವಾಗಿ ನಿಂದಿಸಿದರು ಎನ್ನಳಾದ ಪ್ರಕರಣ ಹಾಗೂ ಸಚಿವರ ಸಹಚರರ ವಿರುದ್ಧ ಹಲ್ಲೆ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಮಂಗಳವಾರ ಸಿಐಡಿಗೆ ವಹಿಸಿದೆ. ಪ್ರಕರಣದ ತನಿಖೆಗೆ ಪಿಎಸ್‌ಐ ನೇಮಕಾತಿ ಹಗರಣದ ಸಾರಥ್ಯ ವಹಿಸಿದ್ದ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಖಾ ತಂಡವನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ರಚಿಸಿದ್ದು, ಡಿವೈಎಸ್ಪಿ ಕೇಶವಮೂರ್ತಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.
ಈ ತಂಡ ರಚನೆ ಬೆನ್ನಲ್ಲೇ ಅಖಾಡಕ್ಕೆ ಇಳಿದಿರುವ ಸಿಐಡಿ ಅಧಿಕಾರಿಗಳು ಬೆಳಗಾವಿ ಪೊಲೀಸರನ್ನು ಸಂಪರ್ಕಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ವಿಧಾನಪರಿಷತ್ ಸಿ.ಟಿ. ರವಿ ವಿರುದ್ಧ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿರುವುದಾಗಿ ಬೆಳಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಸಚಿವರ ಹೇಳಿಕೆ ಬೆನ್ನಲ್ಲೇ ಸಂಜೆ ಹೊತ್ತಿಗೆ ಸಿಐಡಿ ತನಿಖೆಗಿಳಿದಿದೆ. ಅಲ್ಲದೆ ತನಿಖೆ ಸಲುವಾಗಿ ಬೆಳಗಾವಿಗೆ ಬುಧವಾರ ಸಿಐಡಿ ತಂಡ ತೆರಲಿದೆ ಎಂದು ತಿಳಿದು ಬಂದಿದೆ.
ಭತ್ತ ಕಟಾವು ಮಾಡಲು ಕೂಲಿ ಕಾರ್ಮಿಕರು ಇಲ್ಲ.. ಯಂತ್ರವು ಇಲ್ಲ: ಮತ್ತೊಂದೆಡೆ ಮಾರುಕಟ್ಟೆಯ ಸಮಸ್ಯೆ!
ಕಾನೂನು ತಜ್ಞರ ಜತೆ ಸಿಐಡಿ ಸಮಾಲೋಚನೆ: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ತನಿಖೆ ಸಂಬಂಧ ಕಾನೂನು ತಜ್ಞರ ಜತೆ ಡಿಜಿಪಿ ಸಲೀಂ, ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ಎಸ್ಪಿ ರಾಘವೇಂದ್ರ ಹೆಗಡೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಕಾರ್ಯಾಂಗ ಮತ್ತು ಶಾಸಕಾಂಗ ನಡುವೆ ಈ ಪ್ರಕರಣ ತಿಕ್ಕಾಟಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ತನಿಖೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪೀಕರ್‌ಗೆ ಮನವಿ ಸಾಧ್ಯತೆ: ಸಿ.ಟಿ.ರವಿ ಪ್ರಕರಣದ ತನಿಖೆಗೆ ಸಹಕಾರ ಕೋರಿ ವಿಧಾನಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಗೆ ಸಿಐಡಿ ಮನವಿ ಸಲ್ಲಿಸಲು ಮುಂದಾಗಿದೆ. ಪ್ರಕರಣದ ತನಿಖೆ ಸಲುವಾಗಿ ವಿಧಾನಪರಿಷತ್‌ನಲ್ಲಿ ಮಹಜರ್ ನಡೆಸಿಬೇಕಿದೆ. ಅಲ್ಲದೆ ಕೃತ್ಯ ನಡೆದ ವೇಳೆ ಉಪಸ್ಥಿತರಿದ್ದ ಸದಸ್ಯರ ವಿಚಾರಣೆ ನಡೆಸಬೇಕು ಹಾಗೂ ಘಟನೆ ಕುರಿತು ವಿಡಿಯೋ, ಆಡಿಯೋ ಹಾಗೂ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಬೇಕಿದೆ. ಹೀಗಾಗಿ ತನಿಖೆಗೆ ಸ್ಪೀಕರ್ ರವರ ನೆರವು ಕೋರಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?
ನ್ಯಾಯಾಲಯದ ಪರೋಕ್ಷ ಸಮ್ಮತಿ: ನಿಂದನೆ ಪ್ರಕರಣದಲ್ಲಿ ರವಿ ಅವರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಮೌಖಿಕ ಆದೇಶದಲ್ಲಿ ಹೈಕೋರ್ಟ್, ಪ್ರಕರಣ ಸಂಬಂಧ ಪೊಲೀಸರು ವಿಚಾರಣೆಗೆ ಕರೆದರೆ ಹಾಜರಾಗುವಂತೆ ಅವರಿಗೆ ಸೂಚಿಸಿದ್ದರು. ಹೀಗಾಗಿ ತನಿಖೆ ಸಹಕರಿಸಬೇಕು ಎಂದು ನ್ಯಾಯಾಲಯ ಹೇಳಿರುವ ಕಾರಣ ರವಿ ವಿರುದ್ಧ ಪೊಲೀಸರ ತನಿಖೆ ಮುಂದುವರೆಯಲಿದೆ ಎಂದೇ ಅರ್ಥ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.