ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ತೇವೆ: ಸಿದ್ದುಗೆ ಈಶ್ವರಪ್ಪ ಟಾಂಗ್
* ಸಿಎಂ ತವರು ಜಿಲ್ಲೆಯ ಹಾನಗಲ್‌ನಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
* ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಗೆದ್ದಿದ್ದೇವೆ ಎನ್ನುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ನಾಯಕರು
* ಇದಕ್ಕೆ ಟಾಂಗ್ ಕೊಟ್ಟ ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, (ನ.03): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತವರು ಜಿಲ್ಲೆಯಲ್ಲಿ ಬರುವ ಹಾನಗಲ್ ಉಪಚುನಾವಣೆಯಲ್ಲಿ (Hangal By Election) ಕಾಂಗ್ರೆಸ್ (ಶ್ರೀನಿವಾಸ್ ಮಾನೆ) ಗೆದ್ದು ಬೀಗಿದೆ. ಇದರಿಂದ ಕಾಂಗ್ರೆಸ್ (Congress) ಹುಮ್ಮಸ್ಸಿನಲ್ಲಿದೆ.
ಇನ್ನು ಈ ಫಲಿತಾಂಶದ ಬಗ್ಗೆ ಶಿವಮೊಗ್ಗದಲ್ಲಿಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಪ್ರತಿಕ್ರಿಯಿಸಿದ್ದು, ಹಾನಗಲ್‌ನಲ್ಲಿ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದ್ದಾರೆ. ಅದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸುನಾಮಿ ಎನಿಸಿಬಿಟ್ಟಿದೆ ಎಂದು ವ್ಯಂಗ್ಯವಾಡಿದರು.
Hangal, Sindagi By Poll Result:ಸಿಎಂ ಕ್ಷೇತ್ರದಲ್ಲಿ ತಂತ್ರ ಸಫಲ, ಕಾಂಗ್ರೆಸ್‌ಗೆ ಟಾನಿಕ್
ಆಡಳಿತ ವಿರೋಧಿ ಸುನಾಮಿ ಎಂಬ ಸಿದ್ದಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಸುನಾಮಿಯಲ್ಲಿ ಸಿದ್ದರಾಮಯ್ಯನವರೇ ಕೊಚ್ಚಿ ಹೋದರು. ಉಪಚುನಾವಣೆ ಸುನಾಮಿಯಲ್ಲಿ ಕಾಂಗ್ರೆಸ್ನವರು ಸಿಂದಗಿಯಲ್ಲಿ ಸಹ ಈಗ ಕೊಚ್ಚಿ ಹೋಗಿದ್ದಾರೆ. ಹಾನಗಲ್‌ನಲ್ಲಿ ಕಡಿಮೆ ಅಂತರದಲ್ಲಿ ಆಕಸ್ಮಿಕವಾಗಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಸ್ಥಾನ ಇಲ್ಲ ಎಂದು ಮೊನ್ನೆ ನಡೆದ ಚುನಾವಣೆಯಲ್ಲಿ ಗೊತ್ತಾಗಿದೆ. ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕಾಂಗ್ರೆಸ್ ಕೂಡ ಪ್ರಾದೇಶಿಕ ಪಕ್ಷವಾಗಿ ಕುಗ್ಗುತ್ತಿದೆ ಎಂದರು.
ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ
ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರದಲ್ಲಿ ಸೋತಿದ್ದಾರೆ. ನಾನು ಒಪ್ಪಿಕೊಳ್ಳುತ್ತೇನೆ. ಚಾಮುಂಡೇಶ್ವರಿಯಲ್ಲಿ ಸ್ವತಃ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಸೋತಿದ್ದಾರೆ. ಜೆ.ಹೆಚ್.ಪಟೇಲ್ ಸಿಎಂ ಆಗಿ ಚನ್ನಗಿರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ನವರು ಏನು ಹೇಳ್ತಾರೆ. ಒಂದೇ ಒಂದು ಸೋಲು ಎಲ್ಲವನ್ನೂ ತೀರ್ಮಾನ ಮಾಡಲ್ಲ ಎಂದು ತಿಳಿಸಿದರು.
ನಾವು ಲೋಕಸಭೆ, ಉಪಚುನಾವಣೆ, ಪಾಲಿಕೆ ಹಲವೆಡೆ ಗೆದ್ದಿದ್ದೇವೆ. ಗೆಲುವೇ ಬಿಜೆಪಿಯ ತೀರ್ಮಾನ, ಜನ ಕೂಡ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಮುಳುಗುವ ಪಕ್ಷಕ್ಕೆ ಹಾನಗಲ್ ಜನರು ಜೀವ ಕೊಟ್ಟಿದ್ದಾರೆ, ದಯೇ ತೋರಿಸಿದ್ದಾರೆ. ಸಿದ್ದರಾಮಯ್ಯ ಹೇಳಿದ ಪ್ರತಿಯೊಂದು ಕೂಡ ಸುಳ್ಳಾಗುತ್ತೆ. ಮೊದಲು ಅವರು ಅವರ ಪಕ್ಷದ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್‌ಗೆ ಹೊಸ ಚೈತನ್ಯ
ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ (By Election Result) ಕಾಂಗ್ರೆಸ್(Congress) ಪಾಲಿಗೆ ಹೊಸ ಚೈತನ್ಯ ನೀಡಿದೆ. ಏರಿಕೆಯ ಗತಿಯಲ್ಲೇ ಇದ್ದ ಬಿಜೆಪಿಯ (BJP) ವರ್ಚಸ್ಸಿಗೆ ತಡೆ ಬೀಳುವ ಲಕ್ಷಣ ಈ ಫಲಿತಾಂಶದಿಂದ ಗೋಚರಿಸಿದೆ ಎಂದೇ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ದೊರೆತ ಟಾನಿಕ್ ಈ ಫಲಿತಾಂಶ ಎಂದೇ ಭಾವಿಸಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಸಿಂದಗಿ(Sindagi) ಹಾಗೂ ಹಾನಗಲ್ (Hangal) ಎರಡು ಕ್ಷೇತ್ರಗಳು ಕಾಂಗ್ರೆಸ್‌ನದ್ದಲ್ಲ. ಜೆಡಿಎಸ್ (JDS) ಹಾಗೂ ಬಿಜೆಪಿಗೆ ಸೇರಿದ್ದ ಈ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾದ ಹಾನಗಲ್ ಅನ್ನು ಬುಟ್ಟಿಗೆ ಹಾಕಿಕೊಂಡಿರುವುದು ಹಾಗೂ ಅಸ್ತಿತ್ವವೇ ಇರದಿದ್ದ ಸಿಂದಗಿ ಕ್ಷೇತ್ರದಲ್ಲಿ ತನ್ನ ಬೇರುಗಳನ್ನು ಭದ್ರವಾಗಿ ನೆಲೆಯೂರಿಸಿರುವುದು ಹರುಷ ತಂದಿದೆ. ಮುಖ್ಯವಾಗಿ ಮುಖ್ಯಮಂತ್ರಿಯವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರ ಶಿಗ್ಗಾಂವ್‌ಗೆ ಆತುಕೊಂಡಿರುವ ಹಾನಗಲ್ ಕ್ಷೇತ್ರದ ಗೆಲುವು ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಮತಗಳ ವಿವರ
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,865 ಮತ ಲಭಿಸಿದ್ದು, ಅವರು 31,185 ಮತಗಳ ಅಂತರದಿಂದ ವಿಜಯ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಲಭ್ಯವಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳಿಗೆ ತೃಪ್ತಿಯಾಗಬೇಕಾಗಿ ಬಂದಿದೆ. ನೋಟಾಗೆ 1,031 ಮತಗಳ ಚಲಾವಣೆ ಆಗಿದೆ.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಒಟ್ಟು 87,490 ಮತಗಳು ಲಭಿಸಿದ್ದು, 7,373 ಮತಗಳ ಅಂತರದಿಂದ ಗೆಲುವು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 80,117 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ಗೆ ಕೇವಲ 927 ಮತಗಳು ಸಿಕ್ಕಿವೆ. ನೋಟಾಗೆ 529 ಮತಗಳ ಬಿದ್ದಿವೆ.