ಶಿವಮೊಗ್ಗ, (ಮಾ.10): ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿ ವೇಳೆ ಗಲಾಟೆ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೇ ಮಾರ್ಚ್ 13ರಂದು ಶಿವಮೊಗ್ಗ ಚಲೋ ನಡೆಸಲು ಮುಂದಾಗಿದೆ. 

ಅಮದು ಶಿವಮೊಗ್ಗ ಎಸ್ಪಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು, ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ ಮಟ್ಟದ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಪ್ರತಿಕ್ರಿಯಿಸಿದ್ದು, ಭದ್ರಾವತಿ ಘಟನೆಯನ್ನ ರಾಜಕಾರಣಕ್ಕೆ ಬಳಕೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಶಿವಮೊಗ್ಗ ಚಲೋಗೆ ಬರುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಭಾರತ್ ಮಾತಾಕಿ ಜೈ, ಜೈಶ್ರೀರಾಮ್ ಎಂದು ಕೂಗಿದ್ದು ತಪ್ಪಾ?  ಈ ಬಗ್ಗೆ ಸ್ಪಷ್ಟೀಕರಣ ನೀಡಿ ನಂತರ ಪ್ರತಿಭಟನೆ ನಡೆಸಿ ಎಂದು ಸಚಿವ ಈಶ್ವರಪ್ಪ ಸವಾಲು ಹಾಕಿದರು.

'ಸಂಗಮೇಶ್​ ವಿರುದ್ಧ 307 ಕೇಸ್​ ಹಾಕಿ, ಬಿಜೆಪಿಗೆ ಕರ್ಕೊಂಡು ಹೋಗಲು ಯತ್ನಿಸಿದ್ದಾರೆ'

ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಜೈಶ್ರೀರಾಮ್ ಎಂದು ಕೂಗಿದರೆ ತಪ್ಪೇ? ಸಿದ್ದರಾಮಯ್ಯ ಡಿಕೆಶಿ ಒಟ್ಟಾಗಿ ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಶಿವಮೊಗ್ಗಕ್ಕೆ ಬಂದರೆ ಜೈಶ್ರೀರಾಮ್ ಎಂದು ಕೂಗಿದ್ದು ತಪ್ಪಾ ಎಂದು ಮೊದಲು ಸ್ಪಷ್ಟಪಡಿಸಬೇಕು ಎಂದರು.

ನನ್ನನ್ನ, ಎಂಪಿ ಬಿ.ವೈ.ರಾಘವೇಂದ್ರರನ್ನ ಹಾಗೂ ಸಿಎಂ ಬಿಎಸ್ ವೈರನ್ನೂ ಟೀಕೆ ಮಾಡಲಾಗಿದೆ. ಟೀಕೆ ಮಾಡಲಿ ಬೇಜಾರಿಲ್ಲ. ಆದರೆ ನಾವು ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡಿದ್ದರೆ ನಮ್ಮವರ ವಿರುದ್ಧ ದೂರು ದಾಖಲಾಗುತ್ತಿತ್ತಾ? ಎಂದು ಪ್ರಶ್ನಿಸಿದರು. ನಮ್ಮ ಕಾರ್ಯಕರ್ತ ಮುಂಗೇಟಿ ರುದ್ರೇಶ್ರವರನ್ನ ತುಳಿದು ಹಾಕಿದ್ದಾರೆ. ಈ ಹಲ್ಲೆ ಎಷ್ಟು ಸರಿ ಎಂದು ಪ್ರಶ್ನಿಸಿದರು.