Lok Sabha Election 2024: ಚಂದ್ರಯಾನ-3 ಯಶಸ್ವಿಯಾಗಿದೆ, ಇದಕ್ಕೆ ಪ್ರಧಾನಿ ಮೋದಿ ಕಾರಣ: ಪ್ರಜ್ವಲ್ ರೇವಣ್ಣ
ಕೇಂದ್ರ ಸರ್ಕಾರದ ಯೋಜನೆಗಳು ಹತ್ತು ವರ್ಷಗಳಿಂದ ಎಲ್ಲಾ ವರ್ಗದ ಜನರಿಗೆ ತಲುಪಿವೆ, ಆ ಯೋಜನೆಗಳನ್ನು ವಿಸ್ತರಿಸಿ, ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದರು.
ಹಾಸನ (ಏ.14): ಕೇಂದ್ರ ಸರ್ಕಾರದ ಯೋಜನೆಗಳು ಹತ್ತು ವರ್ಷಗಳಿಂದ ಎಲ್ಲಾ ವರ್ಗದ ಜನರಿಗೆ ತಲುಪಿವೆ, ಆ ಯೋಜನೆಗಳನ್ನು ವಿಸ್ತರಿಸಿ, ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದರು. ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಬಿಜೆಪಿ ಪ್ರಣಾಳಿಕೆ ಎಲ್ಲಾ ವರ್ಗದ ಸಾಮಾನ್ಯ ಜನರಿಗೂ ಮುಟ್ಟುವಂತಿದೆ. ಬಿಜೆಪಿಯ ಪ್ರಣಾಳಿಕೆ ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.
ಚಂದ್ರಯಾನ-2 ಯಶಸ್ವಿಯಾಗಿದೆ, ಇದಕ್ಕೆ ಕಾರಣ ಮೋದಿಯವರ ಸಹಕಾರ, ವಿಜ್ಞಾನಿಗಳ ಮೇಲಿಟ್ಟಿರುವ ವಿಶ್ವಾಸ/ ಯುದ್ದಕ್ಕೆ ಅನುಕೂಲವಾಗುವ ಉಪಗ್ರಹ, ಜನರಿಗೆ ಅನುಕೂಲವಾಗುವ ಉಪಗ್ರಹಗಳ ಉಡಾವಣೆ ಆಗುತ್ತಿದೆ. ಇದಲ್ಲೆದ್ದಕ್ಕೂ ಮೋದಿಯವರು ಶಕ್ತಿ ತುಂಬುತ್ತಿದ್ದಾರೆ. ನಾರಿಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಲಾಗುತ್ತಿದೆ. ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಜೊತೆಗೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ದೇವೇಗೌಡರು ಹಾಗೂ ನರೇಂದ್ರ ಮೋದಿ ಒಟ್ಟಾಗಿರುವುದು ಶಕ್ತಿ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತೆ. ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆ ಮಾಡಿದ್ದಾರೆ. ನೋಂದಣಿ ಜಾಸ್ತಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದರಿಂದ ರೈತರಿಗೆ ಅನುಕೂಲವಾಗಲಿದೆ. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ರಾಜಕೀಯ ಯೋಜನೆಗಳಲ್ಲ. ಎಲ್ಲರ ಮನ, ಮನಸ್ಸು ಮುಟ್ಟುವ ಯೋಜನೆಗಳು. ಯಾವುದೇ ರೀತಿ ವಿಫಲವಾಗದೆ, ಸಂಪೂರ್ಣ ಫಲ ಕೊಡುವ ಯೋಜನೆಗಳು. ಕಾಂಗ್ರೆಸ್ ಪಕ್ಷಕ್ಕೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನು ಬರೋದಿಲ್ಲ. ಒಬ್ಬ ಎಂಪಿಯಾಗಿ ಆಯ್ಕೆಯಾದಾಗ 27 ವರ್ಷ ಮೋದಿಯವರು, ಕೇಂದ್ರ ಸಚಿವರು ನನ್ನನ್ನು ಗುರುತಿಸಿ ಸುಮಾರು ಹದಿನಾರುವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ ಎಂದರು.
ಒಂದು ಜಿಲ್ಲೆಗೆ ಅಷ್ಟು ಅನುದಾನ ಕೊಟ್ಟಿರುವವರು ರಾಜ್ಯಕ್ಕೆ ಏಕೆ ಅನ್ಯಾಯ ಮಾಡ್ತಾರೆ. ಯುಪಿಎ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಏನೇನು ಬಂದಿದೆ ಹೇಳಲಿ. 12 ಸಾವಿರ ಎಂಎಸ್‌ಪಿ ದರ ಕೊಡುವ ಮೂಲಕ ಕೊಬ್ಬರಿ ಬೆಳೆಗಾರರಿಗೆ ಆಶ್ರಯದಾತರಾಗಿದ್ದಾರೆ. ಕಾಂಗ್ರೆಸ್ ಕೇವಲ ದೂಷಿಸಲು ಕೆಲಸ ಮಾಡುತ್ತಿದೆ. ರಾಜ್ಯದ ಪರವಾಗಿ ಎನ್‌ಡಿಎ ಸರ್ಕಾರ ನಿಂತಿದೆ. ನಾವೆಲ್ಲ ಅದರ ಜೊತೆ ನಿಲ್ಲುವ ಕೆಲಸ ಮಾಡ್ತಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಜನ ಎನ್‌ಡಿಎ ಪರ ನಿಂತು ಮೋದಿಯವರರಿಗೆ ಶಕ್ತಿ ತುಂಬುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.