ಕೇಂದ್ರ ಸರ್ಕಾರ ಅಕ್ಕಿ ನೀಡದೆ ತಾರತಮ್ಯ: ಸಚಿವ ಕೆ.ಎಚ್.ಮುನಿಯಪ್ಪ ಆರೋಪ
ಕೇಂದ್ರ ಸರ್ಕಾರ ಇದುವರೆಗೂ ಬರಪರಿಹಾರ ಹಣ ಬಿಡುಗಡೆ ಮಾಡದೆ, ಬಡವರಿಗೆ ವಿತರಣೆ ಮಾಡಲು ಅಕ್ಕಿ ನೀಡದೆ ಶೋಷಣೆ ಮಾಡಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಆರೋಪ ಮಾಡಿದರು.
ಚಾಮರಾಜನಗರ (ಏ.12): ಕೇಂದ್ರ ಸರ್ಕಾರ ಇದುವರೆಗೂ ಬರಪರಿಹಾರ ಹಣ ಬಿಡುಗಡೆ ಮಾಡದೆ, ಬಡವರಿಗೆ ವಿತರಣೆ ಮಾಡಲು ಅಕ್ಕಿ ನೀಡದೆ ಶೋಷಣೆ ಮಾಡಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು, ಕೇಂದ್ರ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿದೆ. ಈ ಹಿಂದೆ ಯಾವ ಪ್ರಧಾನಿಯೂ ಈ ರೀತಿ ತಾರತಮ್ಯ ಮಾಡಿರಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನತೆಗೆ ಅನುಕೂಲ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಅಕ್ಕಿ ನೀಡುವುದಾಗಿ ಭರವಸೆ ನೀಡಿ ನಂತರ ಕೊಡದೆ ಮೋಸ ಮಾಡಿತು. ನಂತರ 38 ರು.ಗಳಿಗೆ ಖರೀದಿ ಮಾಡಿ 19 ರು.ಗಳಿಗೆ ಕೇಂದ್ರ ಸರ್ಕಾರವೇ ಮಾರಾಟ ಮಾಡುವ ಪರಿಸ್ಧಿತಿ ನಿರ್ಮಾಣವಾಗಿ, ಸಾಕಷ್ಟು ನಷ್ಟವಾಯಿತು. ನಾವು ಕೇಳಿದಾಗ ಕೊಡದೆ ನಂತರ ಮಾರಾಟ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ, ಜನರ ವಿಶ್ವಾಸದಿಂದ ಮೈಸೂರು- ಕೊಡುಗು, ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರ ಸೇರಿದಂತೆ ರಾಜ್ಯದ ೨೮ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಏ.೨೬ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಜನರ ಒಂದೊಂದು ಮತದಿಂದ ದೇಶದ ರಕ್ಷಣೆ: ಡಾ.ಕೆ.ಸುಧಾಕರ್
ಈ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಪ ಸದಸ್ಯ ಡಾ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ಬಸವರಾಜು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್‌ಅಸ್ಗರ್, ಎಚ್.ವಿ.ಚಂದ್ರು ಹಾಜರಿದ್ದರು.