Asianet Suvarna News Asianet Suvarna News

ಸಿದ್ದು ರಾಜೀನಾಮೆ ಕೊಟ್ರೆ ನಾನೂ ಕೊಡುವೆ: ಸಚಿವ ಸುಧಾಕರ್‌

ಸಿದ್ದು ಸಿಎಂ ಆದಾಗಲೂ ಬಾಣಂತಿ, ಶಿಶು ಸಾವಾಗಿತ್ತು, ಈ ಬಗ್ಗೆ ದಾಖಲೆ ನೀಡುವೆ, ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು, ಸಿದ್ದರಾಮಯ್ಯಗೆ ಸಚಿವ ಸುಧಾಕರ್‌ ಬಹಿರಂಗ ಸವಾಲು 

Minister K Sudhakar Slams Former CM Siddaramaiah grg
Author
First Published Nov 5, 2022, 7:30 AM IST

ಬೆಂಗಳೂರು(ನ.05):  ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಘಟನೆ ಕುರಿತಂತೆ ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಿಂದಿನ ಸರ್ಕಾರಗಳ ಲೋಪದೋಷಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರು, ನವಜಾತ ಶಿಶುಗಳ ಸಾವುಗಳ ದಾಖಲೆ ನೀಡುತ್ತೇನೆ. ಅವರು ಹೊಣೆಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ ನಾನು ಕೂಡಾ ಆರೋಗ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

‘ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಮ್ಮ ಕೀಳು ಮಟ್ಟದ ರಾಜಕಾರಣ ರಾಜ್ಯದ ಜನತೆಗೆ ಹೊಸತೇನಲ್ಲ. 2015ರಲ್ಲಿ ರಾಜ್ಯದಲ್ಲಿ 5,109 ನವಜಾತ ಶಿಶುಗಳು, 519 ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ. ಆಗ ನೀವು ನಿಮ್ಮ ಆರೋಗ್ಯ ಸಚಿವರ ರಾಜೀನಾಮೆ ಪಡೆದುಕೊಂಡಿರಾ?’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟು ಎದುರಿಸಲು ರಾಜ್ಯ ಸಮರ್ಥ: ಸಚಿವ ಸುಧಾಕರ್‌

‘ಸಾವಿನ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಾರೆಂದರೆ ಇವರು ರಾಜಕೀಯ ನಾಯಕರು ಮಾತ್ರವಲ್ಲ, ಒಬ್ಬ ಉತ್ತಮ ಮಾನವನಾಗಲೂ ಸಾಧ್ಯವಿಲ್ಲ. ಇಷ್ಟುಕೆಳ ಹಂತಕ್ಕೆ ಹೋಗಿ ಅವರು ತೀರ್ಮಾನ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಬಾರದು’ಎಂದಿದ್ದಾರೆ.

ಹಳೇ ಘಟನೆಗಳ ಪ್ರಸ್ತಾಪ:

ಹಿಂದಿನ ಸರ್ಕಾರಗಳ ಆರೋಗ್ಯ ಇಲಾಖೆ ಲೋಪಗಳ ಕುರಿತು ಸರಣಿ ಟ್ವಿಟ್‌ ಮಾಡಿ ಪ್ರಶ್ನಿಸಿರುವ ಸುಧಾಕರ್‌, ‘ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಅವರ ತವರು ಜಿಲ್ಲೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 6 ಬಾಣಂತಿ ಮಹಿಳೆಯರು ಜೀವ ಕಳೆದುಕೊಂಡಾಗ ಅಥವಾ ಕೋಲಾರದಲ್ಲಿ 90 ಹಸುಗೂಸುಗಳ ಮರಣದ ಪ್ರಕರಣ ಬೆಳಕಿಗೆ ಬಂದಾಗ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇನು? 2017ರಲ್ಲಿ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರ ಒಣ ಪ್ರತಿಷ್ಠೆಗೋಸ್ಕರ ವೈದ್ಯರನ್ನು 2 ವಾರ ಮುಷ್ಕರಕ್ಕೆ ದೂಡಿ ರಾಜ್ಯಾದ್ಯಂತ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮುಚ್ಚಿ 65ಕ್ಕೂ ಹೆಚ್ಚು ಜನ ಚಿಕಿತ್ಸೆ ಸಿಗದೆ ಮೃತರಾದರು. ಆತ್ಮಸಾಕ್ಷಿ ಇಲ್ಲದೆ ಅವರ ಸಾವಿಗೆ ಸಾಕ್ಷಿ ಕೇಳಿದ ತಾವು ಯಾವ ನೈತಿಕತೆ ಇಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದೀರಿ?’ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌

ಎಚ್‌ಡಿಕೆಗೂ ತಿರುಗೇಟು:

ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಸುಲುವಾಡಿ ಗ್ರಾಮದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿ 15 ಮಂದಿ ಮೃತಪಟ್ಟಾಗ ಅವರ ಆರೋಗ್ಯ ಸಚಿವರಿಗೆ 2 ದಿನವಾದರೂ ಅದರ ಮಾಹಿತಿಯೇ ಇರಲಿಲ್ಲ. ಮೇ 2019ರಲ್ಲಿ ಕೆಜಿಎಫ್‌ನಲ್ಲಿ ಸಮೀನಾ ಎಂಬ ಗರ್ಭಿಣಿ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕಳೆದುಕೊಂಡಾಗ ರಾಜೀನಾಮೆ ಕೊಟ್ಟರೆ? ಎಂದು ಪ್ರಶ್ನಿಸಿದ್ದಾರೆ. ಜತೆಗೆ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ. ಸಮಸ್ಯೆಗಳನ್ನು ಮೆಟ್ಟಿನಿಂತು ಜನರ ಕಣ್ಣೀರೊರೆಸುವುದು ನಿಜವಾದ ನಾಯಕತ್ವ ಎಂದು ಪರೋಕ್ಷವಾಗಿ ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ.

ಆರೋಗ್ಯ ವ್ಯವಸ್ಥೆ ಪರಿವರ್ತನೆ:

ಇಲಾಖೆ ಅಭಿವೃದ್ಧಿ ಕುರಿತು ಮಾತನಾಡಿರುವ ಆರೋಗ್ಯ ಸಚಿವರು, ‘ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಗರ ಪ್ರದೇಶಗಳಲ್ಲಿ ’ನಮ್ಮ ಕ್ಲಿನಿಕ್‌’ ಸ್ಥಾಪನೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ನಿರ್ಮಾಣ, 4 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂರು ಹಂತಗಳಲ್ಲಿ ಆಮೂಲಾಗ್ರ ಪರಿವರ್ತನೆ ತರಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು. ಕೊರೊನಾದಂತಹ ಶತಮಾನದ ದೊಡ್ಡ ಸಂಕ್ರಾಮಿಕವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸಿದ್ದೇವೆ. ಮುಂದೆಂದೂ ಈ ರೀತಿಯ ಘಟನೆಗಳು ಮರುಕಳಿಸದಂತೆ ನಮ್ಮ ಸರ್ಕಾರ ಕಾನೂನಿಗೆ ಸೂಕ್ತ ತಿದ್ದುಪಡಿ ಸಹ ತರಲಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios