ಬೆಂಗಳೂರು, (ಜೂ.03): ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತಪ್ಪಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಅವರು, ನನಗೆ ಹಾಸನ ಉಸ್ತುವಾರಿ ತಪ್ಪಿದಕ್ಕೇನು ನೋವಿಲ್ಲ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ಖುಷಿ ಇದೆ ಎಂದು ತಿಳಿಸಿದರು.

ಬೆಂಗ್ಳೂರಿನಿಂದ ಜೆಡಿಎಸ್ ಭದ್ರಕೋಟೆ ಹಾಸನಕ್ಕೆ: ಕುತೂಹಲ ಮೂಡಿಸಿದ ಬಿಎಸ್‌ವೈ ಆದೇಶ..! 

ಕೆಲವು ಹೊಸ ಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ವಹಿಸಬೇಕಿತ್ತು. ಹಾಗಾಗಿ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇದರಲ್ಲಿ ಬೇರೆ ಅರ್ಥ ಹುಡುಕುವುದು ಬೇಡ ಎಂದು ಹೇಳಿದರು.

ನಾನು ಹಾಸನದ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮಾಜಿ ಸಚಿವ ಎಚ್​​.ಡಿ ರೇವಣ್ಣ ಯಾವುದೇ ಕಾಟ ಕೊಟ್ಟಿಲ್ಲ. ಒಂದು ದಿನವೂ ಅವರಿಂದ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ಈಗ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ನೀಡಿದ್ದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರಿಗೆ ತುಮಕೂರು ಜೊತೆಗೆ ಹೆಚ್ಚುವರಿಯಾಗಿ ಹಾಸನ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಆದ್ರೆ, ಇದೀಗ ಸಚಿವ ಕೆ. ಗೋಪಾಲಯ್ಯ ಅವರಿಗೆ ಹಾಸನ ಜವಾಬ್ದಾರಿಯನ್ನು ನೀಡಲಾಗಿದೆ.